• April 6, 2022

ಕಾಶ್ಮೀರಿ ಮುಸ್ಲಿಂ ಹುಡುಗಿಯಾದ ಕರ್ನಾಟಕದ ಕ್ರಶ್

ಕಾಶ್ಮೀರಿ ಮುಸ್ಲಿಂ ಹುಡುಗಿಯಾದ ಕರ್ನಾಟಕದ ಕ್ರಶ್

ದಕ್ಷಿಣ ಭಾರತದಲ್ಲಿ ತನ್ನದೇ ಆದ ಫ್ಯಾನ್ ಫಾಲೋಯಿಂಗ್ ಹೊಂದಿರುವ ರಶ್ಮಿಕಾ ಅವರಿಗೆ ನಿನ್ನೆ ಹುಟ್ಟುಹಬ್ಬದ ಸಂಭ್ರಮ. ಕರ್ನಾಟಕದ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇನ್ನು ರಶ್ಮಿಕಾ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಅವರ ಅಭಿಮಾನಿಗಳಿಗೆ ಗುಡ್ ನ್ಯೂಸ್ ದೊರಕಿದೆ‌. ಹೌದು, ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದಂದು ಅವರ ಹೊಸ ಚಿತ್ರ ಘೋಷಣೆ ಆಗಿದ್ದು ಚಿತ್ರದ ಮೋಷನ್ ಪೋಸ್ಟರ್ ಕೂಡಾ ರಿಲೀಸ್ ಆಗಿದೆ.

ಈ ಚಿತ್ರದಲ್ಲಿ ಕಾಶ್ಮೀರಿ ಮುಸ್ಲಿಂ ಹುಡುಗಿ ಅಫ್ರೀನ್ ಆಗಿ ನಟಿಸುತ್ತಿದ್ದು ರಶ್ಮಿಕಾ ಅವರು ಹೊಸ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಸ್ಟರ್ ನಲ್ಲಿ ಕೆಂಪು ಹಿಜಾಬ್ ಧರಿಸಿ ಕೈಯಲ್ಲಿ ಬ್ಯಾಗ್ ಹಿಡಿದು ಸುಡುತ್ತಿರುವ ಕಾರುಗಳ ಮಧ್ಯೆ ಅವರು ನಡೆದುಕೊಂಡು ಹೋಗುತ್ತಿದ್ದಾರೆ. ಲಂಡನ್ ನ ಬಿಗ್ ಬೇನ್ ಗಡಿಯಾರ ಕೂಡಾ ಈ ಪೋಸ್ಟರ್ ನಲ್ಲಿ ಕಾಣಿಸುತ್ತಿದೆ. ಈ ಪಾತ್ರ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ.

ಇದುವರೆಗೂ ಹೋಮ್ಲಿ ಹುಡುಗಿಯ ಪಾತ್ರಗಳಲ್ಲಿಯೇ ನಟಿಸುತ್ತಿದ್ದ ರಶ್ಮಿಕಾ ಈ ಚಿತ್ರದ ಮೂಲಕ ವಿಭಿನ್ನ ಪಾತ್ರ ಮಾಡುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ ಮಾಡುತ್ತಿರುವ ಈ ಚಿತ್ರದಲ್ಲಿ ದುಲ್ಕರ್ ಸಲ್ಮಾನ್ ನಾಯಕನಾಗಿ ನಟಿಸುತ್ತಿದ್ದಾರೆ. ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಮ್ಮ ಅಫ್ರೀನ್ ಅವರನ್ನು ಭೇಟಿ ಮಾಡಿ ಎಂಬ ಕ್ಯಾಪ್ಶನ್ ಅಡಿಯಲ್ಲಿ ಈ ಪೋಸ್ಟರ್ ರಿಲೀಸ್ ಆಗಿದೆ. ವೈಜಯಂತಿ ಮೂವೀಸ್ ಹಾಗೂ ಸ್ವಪ್ನಾ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಅಶ್ವಿನಿ ದತ್ ಹಾಗೂ ಪ್ರಿಯಾಂಕಾ ದತ್ ಈ ಚಿತ್ರದ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಫೈನಲ್ ಆಗಿಲ್ಲ.

ರಶ್ಮಿಕಾ ಈ ಚಿತ್ರ ಮಾತ್ರವಲ್ಲದೆ ಹಿಂದಿಯಲ್ಲಿ ಮಿಷನ್ ಮಜ್ನು , ಗುಡ್ ಬೈ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ರಣಬೀರ್ ಕಪೂರ್ ಅವರ ಹೊಸ ಚಿತ್ರಕ್ಕೆ ರಶ್ಮಿಕಾ ಅವರೇ ನಾಯಕಿ ಎಂಬ ಮಾತುಗಳು ಕೇಳಿ ಬರುತ್ತಿವೆ.