- April 5, 2022
ಮೊದಲ ಬಾರಿಗೆ ವೈದ್ಯೆಯಾಗಿ ರಂಜನಿ ರಾಘವನ್


ಪುಟ್ಟ ಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿಯಾಗಿ ನಟಿಸಿ ಕರ್ನಾಟಕದ ಮನೆ ಮಗಳು ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ರಂಜನಿ ಸದ್ಯ ಕನ್ನಡತಿಯಾಗಿ ಕನ್ನಡಿಗರಿಗೆ ಮನರಂಜನೆಯ ರಸದೌತಣ ಉಣಬಡಿಸುತ್ತಿದ್ದಾರೆ. ಮಾತು, ನಟನೆ, ನಡೆ, ನುಡಿ ಹೀಗೆ ಕರುನಾಡಿನಾದ್ಯಂತ ತನ್ನದೇ ಆದ ಹವಾ ಸೃಷ್ಟಿ ಮಾಡಿರುವ ರಂಜನಿ ರಾಘವನ್ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಸಕತ್ ಬ್ಯುಸಿ.


ರಾಜಹಂಸ, ಟಕ್ಕರ್, ಸತ್ಯ, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ ಹೀಗೆ ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದಿರುವ ರಂಜನಿ ರಾಘವನ್ ಇದೀಗ ಕನಸಿನ ರಾಣಿಯೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ. ರವೀಂದ್ರ ವಂಶಿ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರದ ಸಿನಿಮಾದಲ್ಲಿ ಮಾಲಾಶ್ರೀ ನಟಿಸುತ್ತಿದ್ದು ಅವರ ಜೊತೆ ತೆರೆ ಹಂಚಿಕೊಳ್ಳುವ ಸುವರ್ಣ ರಂಜನೊಗೆ ದೊರೆತಿದೆ. ಕೋವಿಡ್ ನಂತಹ ಸಾಂಕ್ರಾಮಿಕ ಸಮಯದಲ್ಲಿ ನಮ್ಮ ಸುತ್ತಲಿನ ಘಟನೆಗಳನ್ನು ಇಟ್ಟುಕೊಂಡೇ ರವೀಂದ್ರ ವಂಶಿ ಕಥೆ ಮಾಡಿದ್ದು ಅದರಲ್ಲಿ ಮಾಲಾಶ್ರೀ ಹಾಗೂ ರಂಜನಿ ಇಬ್ಬರೂ ವೈದ್ಯೆಯಾಗಿ ನಟಿಸುತ್ತಿರುವುದು ವಿಶೇಷ.


“ಇದೇ ಮೊದಲ ಬಾರಿಗೆ ನಾನು ವೈದ್ಯೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಸಿನಿಮಾ ರಂಗದ ಜನಪ್ರಿಯ ನಟಿ ಮಾಲಾಶ್ರೀ ಅವರ ಜೊತೆ ನಟಿಸುತ್ತಿದ್ದೇನೆ. ಅದು ನನ್ನ ಪಾಲಿಗೆ ದೊರಕಿದ ಅದೃಷ್ಟವೂ ಹೌದು. ಈ ಸಿನಿಮಾದಲ್ಲಿ ಬರುವ ಒಂದು ಸಮಸ್ಯೆಯನ್ನು ಮಾಲಾಶ್ರೀ ಅವರು ಶಕ್ತಿ ಬಳಸಿ ಬಗೆಹರಿಸಿದರೆ, ನಾನು ನನ್ನ ಯುಕ್ತಿಯಿಂದ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಬಹುದು ಎಂದು ಯೋಚಿಸುತ್ತಿರುತ್ತೇನೆ. ಇಬ್ಬರೂ ಸೇರಿ ಸಮಸ್ಯೆಯನ್ನು ಹೇಗೆ ಬಗೆ ಹರಿಸುತ್ತಾರೆ ಎಂಬುದೇ ಸಿನಿಮಾದ ಕಥಾಹಂದರ” ಎನ್ನುತ್ತಾರೆ ಕನ್ನಡತಿ.


“ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಾನು ನಟಿಸುತ್ತಿದ್ದರೂ ಪ್ರತಿ ಪಾತ್ರವೂ ಭಿನ್ನತೆಯಿಂದ ಕೂಡಿದೆ. ನನ್ನ ಪ್ರಕಾರ ಸಿನಿಮಾ ಹಾಗೂ ಸೀರಿಯಲ್ ಇವೆರಡೂ ಬೇರೆ ಬೇರೆ. ಇನ್ನು ಸಿನಿಮಾದಲ್ಲಿ ಹೊಸ ರೀತಿಯ ಅನ್ವೇಷಣೆಗಳಿಗೆ ಅವಕಾಶ ಜಾಸ್ತಿ. ಅದೇ ಕಾರಣಕ್ಕಾಗಿ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡಬೇಕು ಎಂಬುದೇ ನನ್ನ ಬಯಕೆ. ಅದಕ್ಕಾಗಿ ಪರಭಾಷೆಯ ಧಾರಾವಾಹಿಗಳಲ್ಲಿ ನಟಿಸುವ ಅವಕಾಶ ಬಂದರೂ ನಾನು ನಟಿಸುತ್ತಿಲ್ಲ” ಎಂದು ಹೇಳುತ್ತಾರೆ ರಂಜನಿ ರಾಘವನ್.






