- June 13, 2022
ವಿಭಿನ್ನ ಪ್ರಯತ್ನದತ್ತ ಮುಖ ಮಾಡಿದ ರಂಗಿತರಂಗ ಬೆಡಗಿ


ರಂಗಿತರಂಗ ಸಿನಿಮಾದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ರಾಧಿಕಾ ನಾರಾಯಣ್ ಮತ್ತೆ ಹಿಂತಿರುಗಿ ನೋಡಿದ್ದೇ ಇಲ್ಲ. ರಂಗಿತರಂಗದ ನಂತರ ಯೂ ಟರ್ನ್, ಬಿಬಿ5, ಕಾಫಿ ತೋಟ, ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ, ಅಸತೋಮಾ ಸದ್ಗಮಯ, ಮುಂದಿನ ನಿಲ್ಡಾಣ, ಶಿವಾಜಿ ಸುರತ್ಕಲ್, ಚೇಸ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸುತ್ತಿರುವ ರಾಧಿಕಾ ನಾರಾಯಣ್ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ವೀರ ಕಂಬಳ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಲಿದ್ದಾರೆ.


ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿರುವ ರಾಧಿಕಾ ನಾರಾಯಣ್ ಮನೋಜ್ಞ ನಟನೆಯ ಮೂಲಕ ಸಿನಿಪ್ರಿಯರನ್ನು ತನ್ನತ್ತ ಸೆಳೆದಿದ್ದಾರೆ. ಇನ್ನು ಈಕೆಯ ನಟನಾ ಪ್ರತಿಭೆ ಕೇವಲ ಹಿರಿತೆರೆಗೆ ಮಾತ್ರ ಸೀಮಿತವಲ್ಲ. ಬದಲಿಗೆ ಕಿರುತೆರೆಯಲ್ಲೂ ಈಕೆ ಮೋಡಿ ಮಾಡಿದ್ದಾರೆ. ಕಿರುತೆರೆಯ ಎರಡು ಧಾರಾವಾಹಿಗಳಲ್ಲಿ ಅತಿಥಿ ಪಾತ್ರದಲ್ಲಿ ರಾಧಿಕಾ ಕಾಣಿಸಿಕೊಂಡಿದ್ದು ಅಲ್ಲೂ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.




ಸದ್ಯ ವೀರಕಂಬಳ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ಈಕೆ ಮಗದೊಂದು ಸಿಹಿ ಸುದ್ದಿ ನೀಡಿದ್ದಾರೆ. ಹೌದು, ರಾಧಿಕಾ ನಾರಾಯಣ್ ಹಿಂದಿ ವೆಬ್ ಸಿರೀಸ್ ನಲ್ಲಿ ಅಭಿನಯಿಸಲಿದ್ದಾರೆ. ಈ ಸಂತಸದ ವಿಚಾರವನ್ನು ಸ್ವತಃ ರಾಧಿಕಾ ಅವರೇ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು ಜೊತೆಗೆ ವೆಬ್ ಸರಣಿಯ ಪೋಸ್ಟರ್ ಕೂಡಾ ಶೇರ್ ಮಾಡಿದ್ದಾರೆ.


ಮಂಜು ನಂದನ್ ನಿರ್ದೇಶನದ ಆಯ್ನಾ ಎನ್ನುವ ವೆಬ್ ಸಿರೀಸ್ ನಲ್ಲಿ ರಾಧಿಕಾ ನಾರಾಯಣ್ ನಟಿಸಲಿದ್ದು ತುಂಬಾ ಸಂತಸವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಶೀಘ್ರದಲ್ಲಿಯೇ ವೆಬ್ ಸಿರೀಸ್ ನ ಶೂಟಿಂಗ್ ಶುರುವಾಗಲಿದ್ದು ಮಾಹಿತಿಗಳ ಪ್ರಕಾರ ಇದು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಲಿದೆ.






