- July 11, 2022
ಹೊಯ್ಸಳ ಶೂಟಿಂಗ್ ಸೆಟ್ ನಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ


ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಒಂದು ಕಾಲದಲ್ಲಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ನಟಿ. ಆದರೆ ನಂತರ ಸಿನಿಮಾ ರಂಗದಿಂದ ದೂರವಾದ ನಟಿ ಅಭಿಮಾನಿಗಳಲ್ಲಿ ನಿರಾಸೆಯನ್ನು ಉಂಟು ಮಾಡಿದ್ದರು. ಆದರೂ ತಮ್ಮ ನೆಚ್ಚಿನ ನಟಿ ಮತ್ತೆ ಅಭಿನಯಕ್ಕೆ ಮರಳುವ ಆಸೆಯೊಂದಿಗೆ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸಿನಿಮಾ ರಂಗದಿಂದ ದೂರವಾದ ನಂತರ ರಾಜಕೀಯದಲ್ಲಿ ಬ್ಯುಸಿ ಆದ ನಟಿ ನಂತರ ಅಲ್ಲಿಂದಲೂ ಹೊರಬಂದರು. ಆದರೆ ಇದೀಗ ಮತ್ತೆ ಶೂಟಿಂಗ್ ಸೆಟ್ ನಲ್ಲಿ ಪ್ರತ್ಯಕ್ಷವಾಗಿದ್ದು, ಅಭಿಮಾನಿಗಳ ಸಂತೋಷಕ್ಕೆ ಕಾರಣವಾಗಿದೆ.


ಹೌದು, ರಮ್ಯಾ ಮತ್ತೆ ಸಿನಿಮಾ ಮಾಡುತ್ತಾರಂತೆ ಎಂದು ಸ್ಯಾಂಡಲ್ವುಡ್ ನಲ್ಲಿ ಸುದ್ದಿಯೊಂದು ಹರಿದಾಡುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಸ್ವತಃ ರಮ್ಯಾ ಖಂಡಿತವಾಗಿಯೂ ಸಿನಿಮಾಗೆ ಮತ್ತೆ ಮರಳುವುದಾಗಿ ತಿಳಿಸಿದ್ದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಆದರೆ ಈವರೆಗೂ ಯಾವ ಹೀರೋ ಜೊತೆ ರಮ್ಯಾ ಸಿನಿಮಾ ಮಾಡಲಿದ್ದಾರೆ ಎಂಬ ಮಾಹಿತಿ ತಿಳಿದಿಲ್ಲ.


ಇದರ ನಡುವೆ ಇದೀಗ ರಮ್ಯಾ ಶೂಟಿಂಗ್ ಸೆಟ್ಗೆ ಹೋಗಿದ್ದು, ಅಭಿಮಾನಿಗಳ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ಹೌದು,ರಮ್ಯಾ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದಾರೆ. ಜೊತೆಗೆ ಧನಂಜಯ್ ಹಾಗೂ ಚಿತ್ರತಂಡದ ಜೊತೆ ಕೆಲ ಸಮಯ ಕಳೆದು ಹೋಗಿದ್ದಾರೆ.


ಸ್ಯಾಂಡಲ್ವುಡ್ ನ ನಟ ಡಾಲಿ ಧನಂಜಯ್ ಸದ್ಯ ಹೊಯ್ಸಳ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರದ ಶೂಟಿಂಗ್ ಕಾರ್ಯಗಳು ಭರದಿಂದ ಸಾಗುತ್ತಿವೆ. ಇದರ ನಡುವೆ ರಮ್ಯಾ ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದು, ಧನಂಜಯ್ ಹಾಗೂ ಚಿತ್ರತಂಡದ ಜೊತೆ ಕೆಲ ಸಮಯ ಕಳೆದು ಹೋಗಿದ್ದಾರೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.


ಹೊಯ್ಸಳ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ ಕುರಿತಂತೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಂಡ ರಮ್ಯಾ ‘ವಾರಾಂತ್ಯದಲ್ಲಿ ವಿಜಯ್ ಅವರು ನಿರ್ದೇಶಿಸುತ್ತಿರುವ ಹೊಯ್ಸಳ ಚಿತ್ರದ ಸೆಟ್ ಗೆ ಭೇಟಿ ನೀಡಿದೆ. ಇಂಟೆನ್ಸ್ ಆಕ್ಷನ್ ದೃಶ್ಯವೊಂದನ್ನು ಅವರು ಚಿತ್ರೀಕರಿಸುತ್ತಿದ್ದರು. ಅವರು ಚಿತ್ರೀಕರಿಸಿರುವ ಕೆಲವು ದೃಶ್ಯದ ತುಣುಕುಗಳನ್ನು ನೋಡಿದೆ. ಅವು ಬಹಳ ಚೆನ್ನಾಗಿ ಮೂಡಿಬಂದಿವೆ. ಅಲ್ಲದೇ ಚಾಕ್ಲೆಟ್ ಹಾಗೂ ಆಸಕ್ತಿದಾಯಕ ಮಾತುಕತೆ ಎರಡಕ್ಕೂ ಧನಂಜಯ್ ಅವರಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.


ಜೊತೆಗೆ ”ತೆರೆಯ ಮೇಲೆ ನಿಮ್ಮನ್ನು ಪೋಲೀಸ್ ಪಾತ್ರದಲ್ಲಿ ನೋಡಲು ನನಗೆ ಬಹಳ ಕಾತುರವಿದೆ. ಅಮೃತಾ ಅಯ್ಯರ್ ಇದರಲ್ಲಿನ ನಿಮ್ಮ ಅತ್ಯುನ್ನತ ಅಭಿನಯಕ್ಕೆ ಬಹಳಷ್ಟು ಪ್ರಶಸ್ತಿಗಳು ನಿಮ್ಮ ಪಾಲಾಗುವುದರಲ್ಲಿ ಅನುಮಾನವಿಲ್ಲ. ರತ್ನನ್ ಪ್ರಪಂಚ ಚಿತ್ರದ ಗೆಲುವಿನ ನಂತರ ಗೆಲುವಿನ ಸರಮಾಲೆಯೊಂದಿಗೆ ಮುನ್ನುಗ್ಗುತ್ತಿರುವಿರಿ. ನನ್ನನ್ನು ಕರೆದದ್ದಕ್ಕೆ ಹಾಗೂ ನಿಮ್ಮ ಪ್ರೀತಿಗೆ ನನ್ನ ಧನ್ಯವಾದಗಳು” ಎಂದು ಶುಭ ಹಾರೈಸಿದ್ದಾರೆ.


ಅಭಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ರಮ್ಯಾ ನಂತರ ತಿರುಗಿ ನೋಡಿದುದೇ ಇಲ್ಲ. ಒಂದರ ನಂತರ ಒಂದರಂತೆ ಹಿಟ್ ಸಿನಿಮಾಗಳನ್ನು ನೀಡಿ, ಜನರಿಗೆ ಇಷ್ಟವಾದರು. ಪುನೀತ್ ರಾಜ್ಕುಮಾರ್ ಜೊತೆ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ ರಮ್ಯಾ ಅರಸು ಚಿತ್ರದ ನಂತರ ಮತ್ತೆ ಪುನೀತ್ ಜೊತೆ ಕಾಣಿಸಿಕೊಳ್ಳಲಿಲ್ಲ.


ಹಿಟ್ ಜೋಡಿ ಎಂದು ಗುರುತಿಸಿಕೊಂಡಿದ್ದ ಅವರು ಮತ್ತೆ ಜೊತೆಯಾಗಿ ನಟಿಸುವ ಆಸೆ ಹೊಂದಿದ್ದರು. ಇದರ ಕುರಿತಂತೆ
ಅಪ್ಪು ನಿಧನದ ಸಮಯದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದರು. ಈಗ ಮತ್ತೆ ಚಿತ್ರರಂಗಕ್ಕೆ ಮರಳುವ ಸೂಚನೆ ನೀಡಿರುವ ರಮ್ಯಾ ಹೇಳಿಕೆಯಿಂದ ಅಭಿಮಾನಿಗಳು ಸಂತಸ ಗೊಂಡಿದ್ದಾರೆ.




