- July 3, 2022
ಸಾಯಿ ಪಲ್ಲವಿ ಹೊಸ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಾಥ್.


ಭಾರತದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ದಕ್ಷಿಣ ಚಿತ್ರರಂಗದ ಬ್ಯುಸಿ ನಟಿ ಸಾಯಿ ಪಲ್ಲವಿ ಅವರು ಸಿನಿರಸಿಕರಿಗೆ ಚಿರಪರಿಚಿತ. ‘ಪ್ರೇಮಮ್’ ಚಿತ್ರದ ಮೂಲಕ ಸಿನಿರಸಿಕರ ಕಣ್ಣಿಗೆ ಬಿದ್ದ ಇವರು ತದನಂತರ ತಮ್ಮ ನಟನೆಯಿಂದ ಚಿತ್ರರಂಗದಲ್ಲಿ ಅವರದೇ ಹೊಸ ಜಾಗ ಮಾಡಿಕೊಂಡರು. ಇದೀಗ ಅವರ ಹೊಸ ಸಿನಿಮಾ ‘ಗಾರ್ಗಿ’ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಬಿಡುಗಡೆಯ ದಿನಾಂಕವನ್ನು ಸಹ ಘೋಷಣೆ ಮಾಡಿದೆ. ಕನ್ನಡ ಸೇರಿ ಮೂರು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಾಥ್ ನೀಡುತ್ತಿದ್ದಾರೆ.




ಗೌತಮ್ ರಾಮಚಂದ್ರನ್ ಅವರು ರಚಿಸಿ ನಿರ್ದೇಶಿಸಿರುವ ಈ ಸಿನಿಮಾ ಒಬ್ಬ ಮಿಡಲ್ ಕ್ಲಾಸ್ ಮಹಿಳೆ ನ್ಯಾಯಕ್ಕಾಗಿ ಹೋರಾಡೋ ಕಥೆಯನ್ನ ಹೇಳುವಂತದ್ದು. ತಮಿಳು, ತೆಲುಗು ಹಾಗು ಕನ್ನಡ ಭಾಷೆಗಳಲ್ಲಿ ತೆರೆಮೇಲೆ ಬರಲು ಸಿದ್ದವಾಗಿರೊ ಈ ಸಿನಿಮಾವನ್ನು ಕನ್ನಡದಲ್ಲಿ ಸ್ಯಾಂಡಲ್ವುಡ್ ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅವರ ಮಾಲೀಕತ್ವದ ‘ಪರಂವಾಹ್ ಸ್ಟುಡಿಯೋಸ್’ ಹಾಗು ‘ಕೆ ಆರ್ ಜಿ ಸ್ಟುಡಿಯೋಸ್’ ವಿತರಣೆ ಮಾಡುತ್ತಿದ್ದಾರೆ. ಈ ಚಿತ್ರವನ್ನು ಕನ್ನಡದಲ್ಲಿ ಪ್ರೆಸೆಂಟ್ ಮಾಡುತ್ತಿರುವ ಬಗ್ಗೆ ಸಂತಸದಲ್ಲಿರುವ ರಕ್ಷಿತ್ ಶೆಟ್ಟಿ, ಚಿತ್ರದ ಬಗ್ಗೆ ಮೆಚ್ಚು ಗೆಯ ಮಾತುಗಳನ್ನಾಡುತ್ತಾ ತಮ್ಮ ಹೆಮ್ಮೆಯ ಖುಷಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದೇ ಜುಲೈ 15ರಿಂದ ‘ಗಾರ್ಗಿ’ ಸಿನಿಮಾ ಚಿತ್ರಮಂದಿರಗಳಲ್ಲಿ ನೋಡಲು ಲಭ್ಯವಾಗಲಿದೆ.






“ನಾವು ನಮ್ಮ ಸಿನಿಮಾಗಳನ್ನು ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ, ಅಂತಾದರಲ್ಲಿ ಬೇರೆ ಭಾಷೆಯಿಂದ ನಮ್ಮ ಕನ್ನಡಕ್ಕೆ ಉತ್ತಮ ಸಿನಿಮಾಗಳು ಬಂದಾಗ ಅದನ್ನು ಪ್ರೋತ್ಸಾಹಿಸುವುದು ನಮ್ಮ ಕರ್ತವ್ಯ. ‘ಗರುಡ ಗಮನ ವೃಷಭ ವಾಹನ’ದ ನಂತರ ‘ಗಾರ್ಗಿ’ ನನ್ನ ಮನಸ್ಸಿನಲ್ಲಿ ಉಳಿದಂತಹ ಸಿನಿಮಾಗಳಲ್ಲಿ ಒಂದು. ಸಾಯಿ ಪಲ್ಲವಿ ಅವರು ‘ಗಾರ್ಗಿ’ಯ ಪಾತ್ರಕ್ಕೆ ನೈಜವಾಗಿಯೂ ಜೀವ ತುಂಬಿದ್ದಾರೆ ” ಎಂಬ ಮಾತುಗಳನ್ನಾಡುತ್ತಾರೆ ರಕ್ಷಿತ್. ಸಿನಿಮಾದ ವಿತರಣೆಯ ಜವಾಬ್ದಾರಿಯನ್ನು ತಮಿಳು ಹಾಗು ತೆಲುಗಿನಲ್ಲಿ ಖ್ಯಾತ ನಟನಾ ದಂಪತಿ ಸೂರ್ಯ ಹಾಗು ಜ್ಯೋತಿಕ ಅವರ ‘2ಡಿ ಎಂಟರ್ಟೈನ್ಮೆಂಟ್’ ಸಂಸ್ಥೆ ವಹಿಸಿಕೊಂಡಿದೆ.






ವಿಶೇಷವೆಂದರೆ ಕನ್ನಡ ಆವೃತ್ತಿಗೆ ಸಾಯಿ ಪಲ್ಲವಿ ಅವರೇ ಖುದ್ದಾಗಿ ಡಬ್ ಮಾಡಿದ್ದಾರೆ. ಶೀತಲ್ ಶೆಟ್ಟಿ ಹಾಗು ತಂಡದವರ ಜೊತೆಗೆ ಪಳಗಿ ಕನ್ನಡ ಆವೃತ್ತಿಗೆ ಸಾಯಿ ಪಲ್ಲವಿ ಅವರು ಧ್ವನಿಯಾಗಿದ್ದು, ಇವರು ಡಬ್ಬಿಂಗ್ ಮಾಡುತ್ತಿದ್ದ ವಿಡಿಯೋ ಬಹಳ ಟ್ರೆಂಡ್ ಆಗಿತ್ತು. ಸದ್ಯ ಸಿನಿಮಾ ಜುಲೈ 15ಕ್ಕೆ ತೆರೆಕಾಣುವುದೆಂದು ಘೋಷಿತವಾದ ಮೇಲೆ ಸಾಯಿ ಪಲ್ಲವಿ ಅವರಿಗಾಗಿಯೇ ಚಿತ್ರಮಂದಿರಗಳಿಗೆ ಹೊರಡಲು ಒಂದಷ್ಟು ಅಭಿಮಾನಿ ವರ್ಗ ಕಾಯುತ್ತಿದೆ.


