• June 18, 2022

‘ಕಿರಿಕ್ ಪಾರ್ಟಿ 2’ ನಲ್ಲಿ ಏನಾಗಲಿದೆ ಕರ್ಣನ ಕಥೆ!! ರಕ್ಷಿತ್ ಶೆಟ್ಟಿ ಮಾತು.

‘ಕಿರಿಕ್ ಪಾರ್ಟಿ 2’ ನಲ್ಲಿ ಏನಾಗಲಿದೆ ಕರ್ಣನ ಕಥೆ!! ರಕ್ಷಿತ್ ಶೆಟ್ಟಿ ಮಾತು.

2016ರ ವರ್ಷಾಂತ್ಯದಲ್ಲಿ ತೆರೆಕಂಡಂತಹ ಬ್ಲಾಕ್ ಬಸ್ಟರ್ ಚಿತ್ರ ‘ಕಿರಿಕ್ ಪಾರ್ಟಿ’. ರಕ್ಷಿತ್-ರಿಷಬ್ ಕಾಂಬಿನೇಶನ್ ನಲ್ಲಿ ಮೂಡಿಬಂದ ಈ ಸಿನಿಮಾ, ಒಬ್ಬ ಟೀನೇಜ್ ಇಂಜಿನಿಯರಿಂಗ್ ವಿದ್ಯಾರ್ಥಿಯ ನಾಲ್ಕು ವರ್ಷದ ಕಥೆಯನ್ನು ಬೆಳ್ಳಿಪರದೆ ಮೇಲೆ ಚಿತ್ರಿಸಿತ್ತು. ಯುವಕರಿಂದ ಹಿಡಿದು ಎಲ್ಲ ವರ್ಗದ ಪ್ರೇಕ್ಷಕರಿಂದಲೂ ಅದ್ಭುತ ಪ್ರತಿಕ್ರಿಯೆ ಪಡೆದಿದ್ದ ಈ ಸಿನಿಮಾ ಯಶಸ್ವಿ ಕಲೆಕ್ಷನ್ ಗಳಿಸಿತ್ತು. ಬೇರೆ ಭಾಷೆಗೆ ರಿಮೇಕ್ ಕೂಡ ಆಗಿತ್ತು. ಇದೀಗ ಈ ತಂಡ ಸಿನಿಮಾದ ಮುಂದಿನ ಭಾಗ ಮಾಡಲು ಹೊರಟಿದ್ದಾರೆ. ಹಾಗಾದರೆ ಇಂಜಿನಿಯರಿಂಗ್ ಮುಗಿಸಿರೋ ಕರ್ಣನ ಬದುಕಿನಲ್ಲಿ ಏನೇನಾಗುತ್ತದೆ?

ಕರ್ಣ, ಒಬ್ಬ ಕೊಂಚ ಜವಾಬ್ದಾರಿ ಕಡಿಮೆ ಇದ್ದಂತಹ, ಮಜ ಮಾಡಿಕೊಂಡೇ ಇಂಜಿನಿಯರಿಂಗ್ ಮಾಡುತ್ತಿದ್ದ ವಿದ್ಯಾರ್ಥಿ. ಇವನ ಬದುಕಿನಲ್ಲಿ ‘ಸಾನ್ವಿ’ ಬಂದು ಹೋಗಿದ್ದಳು. ‘ಆರ್ಯ’ನ ಕಥೆ ಈಗಷ್ಟೇ ಶುರುವಾಗುತ್ತಿದೆ. ರಕ್ಷಿತ್ ಹೇಳುವ ಪ್ರಕಾರ, “ಕರ್ಣನ ಬದುಕು ಕೇವಲ ಎರಡೇ ಲವ್ ಸ್ಟೋರಿ ಗೇ ಸೀಮಿತವಲ್ಲ, ಇನ್ನು ಎರಡು ಮೂರು ಹುಡುಗಿಯರು ಕರ್ಣನ ಕಥೆಯಲ್ಲಿ ಬರುತ್ತಾರೆ. ಸಾನ್ವಿ ಬಂದು ಒಂದು ಪಾಠ ಹೇಳಿಕೊಟ್ಟು ಹೋದಳು. ಆರ್ಯ ಇನ್ನೇನು ಪಾಠ ಹೇಳಿಕೊಡಲು ಆರಂಭಿಸಿದ್ದಾಳೆ. ಅವಳಾದ ನಂತರ ಮತ್ತೊಬ್ಬಳು ಬರಬಹುದು. ಈ ಎಲ್ಲ ಲವ್ ಸ್ಟೋರಿಗಳಲ್ಲಿ ಯಾವುದೋ ಒಂದು ಮದುವೆ ವರೆಗೆ ಬರುತ್ತದೆ. ಅಥವಾ ಎಲ್ಲವೂ ಕೊನೆಯಾಗಿ ಅರೆಂಜ್ ಮ್ಯಾರೇಜ್ ಆಗುತ್ತದೆ. ಹೀಗೆ ಕರ್ಣನ ಬದುಕಿನಲ್ಲಿ ಇನ್ನು ಕೆಲವು ಮುಖ್ಯ ಕಥೆಗಳು ಬಾಕಿ ಇವೆ. ಅವನ್ನೆಲ್ಲ ‘ಕಿರಿಕ್ ಪಾರ್ಟಿ 2’ ಹೇಳುತ್ತದೆ” ಎಂದಿದ್ದಾರೆ ರಕ್ಷಿತ್.

ರಕ್ಷಿತ್ ಶೆಟ್ಟಿಯವರು ಸದ್ಯ ‘777 ಚಾರ್ಲಿ’ ಸಿನಿಮಾದ ಪ್ರಚಾರ ಮಾಡುತ್ತಾ, ಅದರ ಯಶಸ್ಸನ್ನು ಸಂಭ್ರಮಿಸುತ್ತಿದ್ದಾರೆ. ನಂತರ ‘ಸಪ್ತ ಸಾಗರದಾಚೆ ಎಲ್ಲೋ’, ರಿಚರ್ಡ್ ಅಂಟೋನಿ’ ಆದಮೇಲೆ ‘ಕಿರಿಕ್ ಪಾರ್ಟಿ 2’ ಸೆಟ್ಟೆರಲಿದೆ. ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಕೆಲಸ ಆರಂಭವಾಗಿದೆಯಂತೆ. ಮತ್ತೊಮ್ಮೆ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ‘ಕಿರಿಕ್ ಪಾರ್ಟಿ’ಯ ಮುಂದಿನ ಕಥೆ ಯಾವಾಗ ಬರುತ್ತದೆ ಎಂದು ಸಿನಿರಸಿಕರು ಕಾಯುತ್ತಿರುವುದಂತು ಸತ್ಯ.