- June 10, 2022
“777 ಚಾರ್ಲಿ ಸಿನಿಮಾ ಸುಲಭದ ಕೆಲಸವಾಗಿರಲಿಲ್ಲ”-ರಕ್ಷಿತ್ ಶೆಟ್ಟಿ


ಪ್ರಸ್ತುತ ಎಲ್ಲೆಡೆ ಸುದ್ದಿಯಲ್ಲಿರೋ ಸಿನಿಮಾ ಎಂದರೆ ‘777 ಚಾರ್ಲಿ’. ಕಿರಣ್ ರಾಜ್ ಅವರ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಅವರು ನಾಯಕರಾಗಿ ನಟಿಸಿರುವ ಈ ಸಿನಿಮಾಗೆ ರಕ್ಷಿತ್ ಅವರೇ ನಿರ್ಮಾಪಕರು. ತಮ್ಮ ‘ಪರಮ್ ವಾಹ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿರುವ ರಕ್ಷಿತ್ ಸದ್ಯ ಪ್ರಚಾರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇಂದು(ಜೂನ್ 10) ಚಿತ್ರಮಂದಿರಗಳಿಗೆ ಅಧಿಕೃತವಾಗಿ ಲಗ್ಗೆಯಿಡುತ್ತಿರೋ ‘777 ಚಾರ್ಲಿ’ ಈಗಾಗಲೇ ಆಯೋಜಿಸಿದ್ದ ಪ್ರೀಮಿಯರ್ ಶೋಗಳಿಂದಲೇ ಎಲ್ಲೆಡೆ ಮೆಚ್ಚುಗೆಯ ಮಾತುಗಳನ್ನು ಪಡೆಯುತ್ತಿದೆ. ಇದೀಗ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ರಕ್ಷಿತ್ ಚಾರ್ಲಿಯ ಸಿನಿಮಾದ ಬಗೆಗಿನ ವಿಶೇಷ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.




777 ಚಾರ್ಲಿ ಒಂದು ಪಾನ್ ಇಂಡಿಯನ್ ಸಿನಿಮಾ. ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ ಸಿನಿಮಾ. ಹಾಗಾಗಿ ಹಿಂದಿ ಭಾಷೆಯ ವಿತರಕರನ್ನು ಪಡೆಯುವಲ್ಲಿ ಅನುಭವಿಸಿದ ಕಷ್ಟಗಳನ್ನು ರಕ್ಷಿತ್ ಹಂಚಿಕೊಂಡಿದ್ದಾರೆ. “ಹಿಂದಿ ಭಾಷೆಯ ನಮ್ಮ ಸಿನಿಮಾದ ತುಣುಕನ್ನು ಹಲವು ವಿತರಕರಿಗೆ(Distributors) ತೋರಿಸಿದ್ದೆವು. ಪ್ರತಿಯೊಬ್ಬರೂ ಕೂಡ ಇದೊಂದು ಪಾನ್-ಇಂಡಿಯನ್ ಸಿನಿಮಾ ಅಲ್ಲ ಎಂಬ ರೀತಿಯ ನೆಗೆಟಿವ್ ಕಾಮೆಂಟ್ಸ್ ನೀಡಿದ್ದರು. ಪಕ್ಕ ಮಾಸ್-ಕಮರ್ಷಿಯಲ್ ಸಿನಿಮಾಗಳು ಮಾತ್ರ ಪಾನ್-ಇಂಡಿಯನ್ ಮಟ್ಟದಲ್ಲಿ ಸದ್ದು ಮಾಡುವುದು ಎಂಬ ನಂಬಿಕೆ ಹಲವರನ್ನು ತುಂಬಿದೆ. ಯಾವ ವಿತರಕರನ್ನು ಕೂಡ ಕಷ್ಟಪಟ್ಟು ಒಪ್ಪಿಸುವ ಕೆಲಸವನ್ನು ನಾವು ಮಾಡಿಲ್ಲ. ಪ್ರತಿಯೊಬ್ಬರು ನೆಗೆಟಿವ್ ಮಾತುಗಳನ್ನಾಡಿದರೂ ಕೂಡ ಈ ಸಿನಿಮಾಗೆ ಭಾರತದಾದ್ಯಂತ ಮಾರುಕಟ್ಟೆಯಿದೆ ಎಂಬ ನಮ್ಮ ನಂಬಿಕೆ ಹಾಗೇ ಉಳಿದಿತ್ತು. ಅದೇ ಕಾರಣಕ್ಕೆ ಹಲವು ಬಾರಿ ಹಲವರ ಬಳಿ ವಿತರಣೆಗೆ ಕೇಳಿದ್ದೆವು. ಕೊನೆಗೆ ‘UFO ಸಿನಿಮಾಸ್’ ಸಂತೋಷದಿಂದ ಸಿನಿಮಾ ವಿತರಣೆಗೆ ಮುಂದೆ ಬಂದರು” ಎನ್ನುತ್ತಾರೆ ರಕ್ಷಿತ್.


ಸುಮಾರು ಮೂರು ವರ್ಷಗಳ ಸಮಯದಲ್ಲಿ ಸುಮಾರು 169 ದಿನಗಳ ಕಾಲ ಚಿತ್ರೀಕರಣ ಮಾಡಿರುವ ಈ ಸಿನಿಮಾವನ್ನು ಪಂಚಭಾಷೆಗಳಲ್ಲಿ ಪಂಚ ವಿತರಕರು ಬಿಡುಗಡೆ ಮಾಡಿದ್ದಾರೆ. ಹಿಂದಿಯಲ್ಲಿ ‘UFO ಸಿನಿಮಾಸ್’ ತೆಲುಗಿನಲ್ಲಿ ರಾಣ ದಗ್ಗುಬಾಟಿ ಅವರ ‘ಸುರೇಶ್ ಪ್ರೊಡಕ್ಷನ್ಸ್’, ತಮಿಳಿನಲ್ಲಿ ಕಾರ್ತಿಕ್ ಸುಬ್ಬರಾಜ್ ಅವರ ‘ಸ್ಟೋನ್ ಬೆಂಚ್ ಸಿನಿಮಾಸ್’, ಮಲಯಾಳಂನಲ್ಲಿ ಪೃಥ್ವಿರಾಜ್ ಸುಕುಮಾರನ್ ಅವರ ‘ಪೃಥ್ವಿರಾಜ್ ಪ್ರೊಡಕ್ಷನ್ಸ್’ ಹಾಗು ಕನ್ನಡದಲ್ಲಿ ‘ಕೆ ಆರ್ ಜಿ ಸ್ಟುಡಿಯೋಸ್’ ಎಲ್ಲೆಡೆ ಸಿನಿಮಾ ವಿತರಿಸಿದೆ. ಟ್ರೈಲರ್ ಹಾಗು ಪ್ರೀಮಿಯರ್ ಶೋಗಳಿಂದ ಎಲ್ಲ ಭಾಷೆಗಳನ್ನು ಅಪಾರ ಅಭಿಮಾನ ಪಡೆದ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡಲಿದೆ ಎಂದು ಕಾದುನೋಡಬೇಕಿದೆ.




