- June 14, 2022
“ನಾನಿದನ್ನೆಲ್ಲ ಮಾಡುತ್ತಿರುವುದೇ ನನ್ನ ಕನಸಿನ ‘ಪುಣ್ಯಕೋಟಿ’ಗಾಗಿ”: ರಕ್ಷಿತ್ ಶೆಟ್ಟಿ.


ಕರಾವಳಿಯ ಕುವರ, ಸದ್ಯ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ವಿಶೇಷ ಛಾಪು ಮೂಡಿಸಿರುವ ನಟ-ನಿರ್ದೇಶಕ-ನಿರ್ಮಾಪಕ ರಕ್ಷಿತ್ ಶೆಟ್ಟಿಯವರು ತಮ್ಮ ಹೊಸ ಸಿನಿಮಾ ‘777 ಚಾರ್ಲಿ’ಯ ಯಶಸ್ಸಿನ ಸಂತಸದಲ್ಲಿದ್ದಾರೆ. ಕಿರಣ್ ರಾಜ್ ನಿರ್ದೇಶನದ ಈ ಸಿನಿಮಾ ಪ್ರಸ್ತುತ ಪ್ರಪಂಚದಾದ್ಯಂತ ಚಿತ್ರಮಂದಿರಗಳನ್ನು ಆಳುತ್ತಿದೆ ಎಂದರೂ ಪ್ರಾಯಷಃ ತಪ್ಪಾಗದು. ಈ ನಡುವೆ ಹಲವಾರು ಯೂಟ್ಯೂಬ್ ಚಾನೆಲ್ ಗಳಿಗೆ, ಮಾಧ್ಯಮಗಳಿಗೆ ಸಂದರ್ಶನ ನೀಡಿರುವ ರಕ್ಷಿತ್ ಶೆಟ್ಟಿ, ತಮ್ಮ ಮುಂದಿನ ಸಿನಿಮಾಗಳ ಬಗ್ಗೆ, ತಮ್ಮ ಕನಸುಗಳ ಬಗ್ಗೆ ಮಾತನಾಡಿದ್ದಾರೆ.


ಯೂಟ್ಯೂಬ್ ನಲ್ಲಿ ರಕ್ಷಿತ್ ಶೆಟ್ಟಿ ಅವರ ಸಂದರ್ಶನ ಇದೆ ಅಂದರೆ ಸಿನಿರಸಿಕರು ಮುಗಿಬಿದ್ದು ನೋಡುವಷ್ಟು ಗಮನಾರ್ಹವಾಗಿರುತ್ತದೆ ಇವರ ಸಂದರ್ಶನಗಳು. ಇತ್ತೀಚೆಗೆ ಯೂಟ್ಯೂಬ್ ನ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡಿದ ರಕ್ಷಿತ್ ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ.”777 ಚಾರ್ಲಿ ನಂತರ ‘ಸಪ್ತ ಸಾಗರದಾಚೆ ಎಲ್ಲೋ’ ಬರಲಿದೆ. ಅದಾದಮೇಲೆ ‘ರಿಚರ್ಡ್ ಅಂಟೋನಿ’ ಆರಂಭಿಸುತ್ತೇವೆ. ‘ಕಿರಿಕ್ ಪಾರ್ಟಿ 2’ ಸಿನಿಮಾದ ಸ್ಕ್ರಿಪ್ಟ್ ವರ್ಕ್ ಕೂಡ ಆರಂಭವಾಗಿದೆ. ಇವೆಲ್ಲದರುಗಳ ನಂತರ ನನ್ನ ಕನಸಿನ ‘ಪುಣ್ಯಕೋಟಿ’ ಸಿನಿಮಾ ಮಾಡೋ ಆಲೋಚನೆಯಿದೆ. ‘ಪುಣ್ಯಕೋಟಿ’ ನನ್ನದೊಂದು ಕನಸಿದ್ದಂತೆ. ನಾನು ಈ ಎಲ್ಲ ಸಿನಿಮಾಗಳನ್ನು ಮಾಡುತ್ತಿರುವುದೇ ಅದಕ್ಕಾಗಿ ಒಂದಷ್ಟು ಅನುಭವಗಳನ್ನ ಪಡೆಯುವುದಕ್ಕೆ. ಪುಣ್ಯಕೋಟಿ ಗೆ ಬಜೆಟ್ ಕೂಡ ದೊಡ್ಡದೇ ಬೇಕಾಗುತ್ತದೆ. ಹಾಗಾಗಿ ಆದಷ್ಟು ಉತ್ತಮ ಚಿತ್ರಗಳನ್ನು ಮಾಡುವ ಭರದಲ್ಲಿದ್ದೇವೆ. ಅದಕ್ಕಾಗಿ ಬಹಳ ರೀಸರ್ಚ್ ಗಳನ್ನೂ ಕೂಡ ಈಗಾಗಲೇ ಮಾಡಿದ್ದೇವೆ, ಮಾಡುತ್ತಿದ್ದೇವೆ ಕೂಡ.”




” ‘ಉಳಿದವರು ಕಂಡಂತೆ’ ನನ್ನೊಳಗಿನ ಮುಗ್ಧತೆಯ ಕಥೆ. ‘ಕಿರಿಕ್ ಪಾರ್ಟಿ’ ನನಗೆ ಅತ್ಯಂತ ಅವಶ್ಯಕವಾಗಿದ್ದ ಒಂದು ಯಶಸ್ಸು. ‘ಅವನೇ ಶ್ರೀಮನ್ನಾರಾಯಣ’ ನನಗೊಂದು ಕಲಿಕೆ, ಅದೇ ರೀತಿ ‘ಪುಣ್ಯಕೋಟಿ’ ನನ್ನ ಕನಸು. ಅದೊಂದು ಸರಣಿ ಚಿತ್ರ ಆಗಿರಲಿದೆ. ಈ ಸಿನಿಮಾಟಿಕ್ ಯೂನಿವರ್ಸ್ ಅಂತಾರಲ್ಲ ಹಾಗೇ. ಅದಕ್ಕಾಗಿಯೇ ಪೂರ್ವತಯಾರಿಗಳೆಲ್ಲ ಆಗುತ್ತಿವೆ. ಆದಷ್ಟು ಬೇಗ ‘ಪುಣ್ಯಕೋಟಿ’ ಆರಂಭಿಸೋ ಆಸೆಯಿದೆ. ” ಎನ್ನುತ್ತಾರೆ ರಕ್ಷಿತ್ ಶೆಟ್ಟಿ.


ಜೂನ್ 10ರಂದು ಬಿಡುಗಡೆಯಾಗಿರೋ ‘777 ಚಾರ್ಲಿ’ ಸಿನಿಮಾ ಅತಿ ಸೂಕ್ಷ್ಮ ಭಾವನೆಗಳನ್ನೊಳಗೊಂಡ ಸಿನಿಮಾ. ಬರೋಬ್ಬರಿ 3 ವರ್ಷ ಈ ಸಿನಿಮಾಗಾಗಿ ಕೆಲಸ ಮಾಡಿದ್ದರು ತಂಡದವರು. ಸದ್ಯ ಪ್ರಪಂಚದ ಸಿನಿರಂಗದ ಎಲ್ಲೆಡೆ ಪ್ರೇಕ್ಷಕರ ಮನಸೆಳೆಯುತ್ತಿದೆ.




