• July 10, 2022

ಪವರ್ ಸ್ಟಾರನ್ನು ನೆನೆದ ಪ್ರಿಯಾ ಆನಂದ್

ಪವರ್ ಸ್ಟಾರನ್ನು ನೆನೆದ ಪ್ರಿಯಾ ಆನಂದ್

ಇನ್ನು ಕೂಡ ಅದೆಷ್ಟೋ ಅಭಿಮಾನಿಗಳು ತಮ್ಮ ಪ್ರೀತಿಯ ಪವರ್ ಸ್ಟಾರ್ ನಿಧನದಿಂದ ಹೊರಬಂದಿಲ್ಲ. ಅವರು ನಿಧನ ಹೊಂದಿ ಒಂದು ವರ್ಷವಾಗಲು ಹತ್ತಿರವಿದ್ದರೂ ಯಾರೂ ಇದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಯಾಕೆಂದರೆ ಪುನೀತ್ ರಾಜಕುಮಾರ್ ಅವರು ಜನಮಾನಸದಲ್ಲಿ ಮೂಡಿಸಿದ ಪ್ರೀತಿ ಮತ್ತು ವಾತ್ಸಲ್ಯ ಅಂತದ್ದು. ಜನರಿಗಾಗಿ ಮಾಡಿದ ಸಾಮಾಜಿಕ ಸೇವೆಯಿಂದ ಎಲ್ಲರ ದಿನಚರಿಯಲ್ಲಿ ಯಾವುದೋ ಒಂದು ರೀತಿಯಲ್ಲಿ ಅವರು ನೆನಪಾಗುತ್ತಲೇ ಇರುತ್ತಾರೆ.

ಇನ್ನು ಪುನೀತ್ ಅವರನ್ನು ಹತ್ತಿರದಿಂದ ಬಲ್ಲ ಮತ್ತು ಅವರೊಂದಿಗೆ ಒಡನಾಡಿದ ತಾರೆಯರೆಲ್ಲಾ ಅವರ ಬಗ್ಗೆ ಏನಾದರೂ ನೆನಪನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇದೀಗ ತೆಲುಗು, ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ಪ್ರಸಿದ್ಧರಾಗಿರುವ ಪ್ರಿಯಾ ಆನಂದ್ ಅಪ್ಪುವನ್ನು ನೆನೆದಿದ್ದಾರೆ.

ಯೂಟ್ಯೂಬ್ ಚಾನೆಲ್ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ”ಅಪ್ಪು ಅವರ ನಿಧನ ನನಗೆ ವೈಯಕ್ತಿಕವಾಗಿ ಆದ ನಷ್ಟವಾಗಿದೆ. ತಮಿಳಿನಲ್ಲಿ ಕಳೆದುಕೊಂಡಿದ್ದ ಲಾಂಚ್ ನನಗೆ ಕನ್ನಡದಲ್ಲಿ ರಾಜಕುಮಾರದ ಮೂಲಕ ಸಿಕ್ಕಿತು. ಹಾಗೂ ರಾಜಕುಮಾರ ಬ್ಲಾಕ್ ಬಾಸ್ಟರ್ ಆದಂತಹ ಸಿನಿಮಾ” ಎಂದರು.

ಜೊತೆಗೆ ಪ್ರಿಯಾ ಆನಂದ್ ರವರು ಜೇಮ್ಸ್ ಚಿತ್ರೀಕರಣದ ಸಂದರ್ಭದಲ್ಲಿ ತೆಗೆದ ಫೋಟೋವನ್ನು ಕೂಡ ಶೇರ್ ಮಾಡಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಕಾಲ ಪುನೀತ್ ಅವರೊಂದಿಗೆ ಪ್ರಿಯಾ ಶೂಟಿಂಗ್ ನಲ್ಲಿ ಭಾಗವಹಿಸಿದ್ದರು.

ಕಳೆದ ವರ್ಷ ಅಕ್ಟೋಬರ್ 29ರಂದು ಪುನೀತ್ ಹೃದಯಾಘಾತದಿಂದ ಕನ್ನಡ ಚಿತ್ರರಂಗವನ್ನಷ್ಟೇ ಅಲ್ಲದೆ ಬಂಧು ಬಳಗವನ್ನು, ಅಪಾರ ಅಭಿಮಾನಿ ಬಳಗವನ್ನು ತೊರೆದಿದ್ದರು. ಪುನೀತ್ ರಾಜಕುಮಾರ್ ಹಾಗೂ ಪ್ರಿಯಾ ಆನಂದ್ ‘ರಾಜಕುಮಾರ’ ಮತ್ತು ‘ಜೇಮ್ಸ್’ ಮೂವಿಗಾಗಿ ಜೊತೆಯಾಗಿ ಕೆಲಸ ಮಾಡಿದ್ದರು. ದುರದೃಷ್ಟವಶಾತ್ ಜೇಮ್ಸ್ ಅವರೊಂದಿಗಿನ ಕೊನೆಯ ಸಿನಿಮಾವಾಗಿತ್ತು.