• June 20, 2022

ಕ್ಯಾಬ್ ಡ್ರೈವರ್ ಆಗಿ ರಂಜಿಸಲಿದ್ದಾರಾ ನಟ ರಾಜ್ ಶೆಟ್ಟಿ

ಕ್ಯಾಬ್ ಡ್ರೈವರ್ ಆಗಿ ರಂಜಿಸಲಿದ್ದಾರಾ ನಟ ರಾಜ್ ಶೆಟ್ಟಿ

ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ರಾಜ್ ಬಿ ಶೆಟ್ಟಿ ಗರುಡ ಗಮನ ವೃಷಭ ವಾಹನ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದ್ದರು. ಇದೀಗ ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿರ್ಗಮನ ಸಿನಿಮಾದಲ್ಲಿ ನಟಿಸಿರುವ ಅವರು ಭಿನ್ನ ಪಾತ್ರದ ಮೂಲಕ ಮತ್ತೆ ಪ್ರೇಕ್ಷಕರನ್ನು ರಂಜಿಸಲು ತಯಾರಾಗಿದ್ದಾರೆ.

“ತುರ್ತು ನಿರ್ಗಮನ ಸಿನಿಮಾದಲ್ಲಿ ನಾನು ಕ್ಯಾಬ್‌ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ತನ್ನ ಅಗತ್ಯಕ್ಕಿಂತಲೂ ಹೆಚ್ಚಿನ ಸಾಲ ಮಾಡಿಕೊಂಡಿರುವ ಆತನಿಗೆ ಡೀಸೆಲ್‌ ಹಾಕಿಸಲು ಹಣ ಇರುವುದಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲಿರುವ ಆತನಿಗೆ ಇಂತಹ ಬದುಕು ಯಾಕೆ ಎಂದೆನಿಸುತ್ತದೆ. ಆದರೆ ಅಮಾ ಸಮಯದಲ್ಲಿ ಅವನಿಗೆ ಹೊಸ ಅವಕಾಶ ದೊರೆತರೆ ಏನಾಗುತ್ತದೆ ಎಂಬುದೇ ನನ್ನ ಪಾತ್ರದ ಸಾರಾಂಶ” ಎಂದು ಹೇಳುತ್ತಾರೆ ರಾಜ್ ಬಿ ಶೆಟ್ಟಿ.

“ಹೆಚ್ಚಾಗಿ ಹಾಸ್ಯ ಪ್ರಧಾನ ಪಾತ್ರಗಳಿಗೆ ನನಗೆ ಅವಕಾಶ ಬರುತ್ತಿದುದು ಹೆಚ್ಚು. ಹೇಮಂತ್ ಕುಮಾರ್ ಅವರು ಪಾತ್ರದ ಬಗ್ಗೆ ಹೇಳಿ ನೀವು ಮಾಡಿದರೆ ಚೆನ್ನ ಎಂದರು. ಹೊಸ ರೀತಿಯ ಪಾತ್ರದ ಅನ್ವೇಷಣೆಯಲ್ಲಿ ನಾನಿದ್ದೆ. ಖುಷಿಯಿಂದ ಒಪ್ಪಿಕೊಂಡೆ” ಎನ್ನುತ್ತಾರೆ ರಾಜ್ ಶೆಟ್ಟಿ.

“ಒಂದು ಮೊಟ್ಟೆಯ ಕಥೆಯ ನಂತರ ನಾನು ಬೇರೆ ಬೇರೆ ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ಆದರೆ ಕೇವಲ ಒಂದೇ ರೀತಿಯ ಪಾತ್ರಕ್ಕೆ ಜೀವ ತುಂಬಲು ನನಗೂ ಇಷ್ಟವಿಲ್ಲ. ಆ ಸಂದರ್ಭದಲ್ಲಿ ಈ ಪಾತ್ರ ಬಂದಾಗ ನಾನು ಅಸ್ತು ಎಂದೆ. ಎಲ್ಲರೂ ನನ್ನನ್ನು ಕಾಮಿಡಿಯನ್ ಆಗಿ ನೋಡುತ್ತಾರೆ. ಆದರೆ ನಾನೊಬ್ಬ ಸೀರಿಯಸ್ ಮನುಷ್ಯ. ಅದು ಈ ಪಾತ್ರದ ಮೂಲಕ ಸಾಬೀತು ಆಗಲಿದೆ” ಎನ್ನುತ್ತಾರೆ ರಾಜ್ ಶೆಟ್ಟಿ.

“ಮೊದಲಿನಿಂದಲೂ ನನಗೆ ಪ್ರಯೋಗ ಎಂದರೆ ತುಂಬಾ ಇಷ್ಟ. ಇನ್ನು ಈ ಕ್ಷೇತ್ರದಲ್ಲಿ ಪ್ರಯೋಗಕ್ಕೆ ಅವಕಾಶ ಜಾಸ್ತಿ. ಇನ್ನು ನನ್ನೊಳಗೆ ಇರುವ ನಟನನ್ನು ಭಿನ್ನವಾಗಿ ಈ ಚಿತ್ರತಂಡ ತೋರಿಸಿದೆ. ಇದು ನನಗೆ ಹೊಸ ರೀತಿಯ ಪಾತ್ರ” ಎಂದು ಸಂತಸ ವ್ಯಕ್ತಪಡಿಸುತ್ತಾರೆ ರಾಜ್ ಶೆಟ್ಟಿ.