• April 10, 2022

ಮತ್ತೆ ತೆರೆಮೇಲೆ ರಾಘವೇಂದ್ರ ರಾಜ್ ಕುಮಾರ್?

ಮತ್ತೆ ತೆರೆಮೇಲೆ ರಾಘವೇಂದ್ರ ರಾಜ್ ಕುಮಾರ್?

ನಟ ರಾಘವೇಂದ್ರ ರಾಜ್ ಕುಮಾರ್ ಈಗ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಮೂಲಕ ಸಿನಿರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್. ಇದೀಗ “13” ಎನ್ನುವ ವಿಭಿನ್ನ ಶೀರ್ಷಿಕೆ ಹೊಂದಿರುವ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಬಣ್ಣ ಹಚ್ಚುತ್ತಿದ್ದು ಅದರಲ್ಲಿ ಗುಜರಿ ಅಂಗಡಿ ಮಾಲೀಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸ್ಯಾಂಡಲ್ ವುಡ್ ನ ಜನಪ್ರಿಯ ನಟಿ ಶ್ರುತಿ ಕೂಡಾ ಸಾಥ್ ನೀಡಲಿದ್ದಾರೆ. ಮುಸ್ಲಿಂ ಮಹಿಳೆಯ ಪಾತ್ರವನ್ನು ನಿರ್ವಹಿಸುತ್ತಿದ್ದು ಈ ಜೋಡಿ ಬರೋಬ್ಬರಿ 25 ವರ್ಷಗಳ ನಂತರ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಇವರಿಬ್ಬರೂ ಜೊತೆಯಾಗಿ “ಗೆಲುವಿನ ಸರದಾರ ” ಚಿತ್ರದಲ್ಲಿ ನಟಿಸಿದ್ದರು.

ಹಿಂದೂ ಹುಡುಗ ಹಾಗೂ ಮುಸ್ಲಿಂ ಹುಡುಗಿಯ ಕಥೆ ಇರುವ ಈ ಸಿನಿಮಾದಲ್ಲಿ ರಾಘಣ್ಣ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ “13” ಚಿತ್ರ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ನರೇಂದ್ರ ಬಾಬು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

2004ರಲ್ಲಿ “ಪಕ್ಕದ ಮನೆ ಹುಡುಗಿ” ಚಿತ್ರದಲ್ಲಿ ನಟಿಸಿದ ನಂತರ ಚಿತ್ರರಂಗದಿಂದ ಕೊಂಚ ದೂರವೇ ಉಳಿದಿದ್ದ ರಾಘಣ್ಣ 2019ರಲ್ಲಿ ಅಮ್ಮನ ಮನೆ ಚಿತ್ರದ ಮೂಲಕ ಕಮ್ ಬ್ಯಾಕ್ ಮಾಡಿದರು. ಈ ಚಿತ್ರದ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ರಾಘಣ್ಣ ಪುನೀತ್ ನಿಧನದ ದುಃಖದಲ್ಲಿಯೂ ಜೀವನ ಸಾಗಿಸುವುದು ಅನಿವಾರ್ಯವಾಗಿದೆ. ಹಾಗಾಗಿ ನಟನೆಯಲ್ಲಿ ಬ್ಯುಸಿಯಾಗಿದ್ದಾರೆ ರಾಘಣ್ಣ.