• March 24, 2022

ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಮಾತನಾಡಿದ ರಾಧಿಕಾ ಪಂಡಿತ್ ಹೇಳಿದ್ದೇನು ಗೊತ್ತಾ?

ನಂದಗೋಕುಲ ಧಾರಾವಾಹಿಯ ಮೂಲಕ ಕಿರುತೆರೆಗೆ ಪರಿಚಿತರಾದ ರಾಧಿಕಾ ಪಂಡಿತ್ ನಟಿಸಿದ್ದು ಕೇವಲ ಮೂರು ಧಾರಾವಾಹಿಗಳಲ್ಲಿ. ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಬೆಳ್ಳಿತೆರೆಗೆ ಜಿಗಿದ ರಾಧಿಕಾ ಮುಂದೆ ಹದಿನೈದಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದರು. ರಾಕಿಂಗ್ ಸ್ಟಾರ್ ಯಶ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಧಿಕಾ ಪಂಡಿತ್ ವಿವಾಹದ ಬಳಿಕ ಬಣ್ಣ ಹಚ್ಚಿದ್ದು ಕೊಂಚ ಕಡಿಮೆಯೇ.

ಮಗಳು, ಮಗನ ಆರೈಕೆಯಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ ನಟನೆಯಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಜಾಸ್ತಿಯೇ ಆ್ಯಕ್ಟೀವ್ ಆಗಿದ್ದಾರೆ. ಬಿಡುವಾದಗಲ್ಲೆಲ್ಲಾ ಮುದ್ದು ಮಕ್ಕಳ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಿರುವ ರಾಧಿಕಾ ಇದೀಗ ಸಮಾಜಕ್ಕೆ ಉಪಯೋಗವಾಗುವಂತಹ ಸಂದೇಶವೊಂದಕ್ಕೆ ದನಿಯಾಗಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ರಾಧಿಕಾ ಪಂಡಿತ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು ಅದರಲ್ಲಿ ಎದೆ ಹಾಲಿನ ಪ್ರಾಮುಖ್ಯತೆ ಬಗ್ಗೆ ಹೇಳಿದ್ದಾರೆ. ಮಾತ್ರವಲ್ಲ ಇದರ ಜೊತೆಗೆ ಎದೆ ಹಾಲು ದಾನ ಮಾಡಿ ಎಂದು ಕೂಡಾ ಅವರು ಹೇಳಿದ್ದಾರೆ. “ಎದೆಹಾಲು ಜೀವನದ ಅಮೂಲ್ಯ ಉಡುಗೊರೆಗಳ ಪೈಕಿ ಒಂದು ಹೌದು. ಯಾಕೆಂದರೆ ಎದೆ ಹಾಲಿನಲ್ಲಿರುವಷ್ಟು ಅಂಶಗಳಿಗೆ ನಾವು ಬೇರೆ ಯಾವುದನ್ನು ಕೂಡಾ ಹೋಲಿಸಲು ಸಾಧ್ಯವಿಲ್ಲ. ನವಜಾತ ಶಿಶುಗಳಿಗಂತೂ ಎದೆ ಹಾಲು ಬೇಕೇ ಬೇಕು. ಎದೆ ಹಾಲು ಪೋಷಕಾಂಶಗಳ ಆಗರ ಮಾತ್ರವಲ್ಲ ಇದು ಅಧಿಕ ಪ್ರಮಾಣದ ರೋಗ ನಿರೋಧಕ ಶಕ್ತಿಯನ್ನು ಕೂಡಾ ಒಳಗೊಂಡಿದೆ” ಎಂದಿದ್ದಾರೆ ರಾಧಿಕಾ ಪಂಡಿತ್.

ಮಿಲ್ಕ್ ಬ್ಯಾಂಕ್ ಬಗ್ಗೆ ಮಾತನಾಡಿರುವ ರಾಧಿಕಾ ಪಂಡಿತ್ “ನಮ್ಮ ದೇಶದಲ್ಲಿ ತುಂಬಾ ಮಕ್ಕಳು ಎದೆಹಾಲು ಸಿಗದೆ ವಂಚಿತರಾಗುತ್ತಿದ್ದಾರೆ. ಅಂತಹ ಮಕ್ಕಳಿಗೆ ಎದೆ ಹಾಲು ದಾನ ಮಾಡಬಹುದಾಗಿದೆ. ಅದಕ್ಕೆಂದೇ ಮಿಲ್ಕ್ ಬ್ಯಾಂಕ್ ಅನ್ನು ಕೂಡಾ ಆರಂಭಿಸಲಾಗಿದೆ. ಅಗತ್ಯಕ್ಕಿಂತ ಹೆಚ್ಚಿಗೆ ಇರುವಂತಹ ಎದೆಹಾಲನ್ನು ದಾನ ಮಾಡಬಹುದು. ಇದರಿಂದ ಎದೆ ಹಾಲು ವಂಚಿತ ಮಕ್ಕಳಿಗೆ ಸಹಾಯ ಮಾಡಿದಂತಾಗುತ್ತದೆ” ಎಂದು ಹೇಳಿದ್ದಾರೆ ರಾಧಿಕಾ ಪಂಡಿತ್.

ಇನ್ನು ಇದರ ಜೊತೆಗೆ ಎದೆ ಹಾಲು ದಾನದ ಬಗ್ಗೆ ಮಾಹಿತಿ ನೀಡಲು ಬೆಂಗಳೂರಿನಲ್ಲಿ ಕಾಲ್ನಡಿಗೆ ಜಾಥಾವನ್ನು ಇದೇ ಮಾರ್ಚ್ 27 ರಂದು ಹಮ್ಮಿಕೊಳ್ಳಲಾಗಿದ್ದು ಈ ಜಾಥಾದಲ್ಲಿ ಭಾಗವಹಿಸುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ ರಾಧಿಕಾ.