• June 16, 2022

ನಿರೂಪಣೆಯಿಂದ ನಟನೆವರೆಗೆ ಮಂಗಳಗೌರಿ ಪಯಣ

ನಿರೂಪಣೆಯಿಂದ ನಟನೆವರೆಗೆ ಮಂಗಳಗೌರಿ ಪಯಣ

ಕಲರ್ಸ್ ಕನ್ನಡ ವಾಹಿನಿಯಲ್ಲಿ ನಾಯಕಿ ಮಂಗಳಗೌರಿಯಾಗಿ ಅಭಿನಯಿಸಿ ಕರುನಾಡಿನಾದ್ಯಂತ ಕೋಟ್ಯಾಂತರ ಮನಸ್ಸು ಸೆಳೆದಿರುವ ಕಾವ್ಯಶ್ರೀ ಒಂದು ಕಾಲದಲ್ಲಿ ನಿರೂಪಕಿಯಾಗಿದ್ದರು ಎಂಬ ವಿಚಾರ ಹಲವರಿಗೆ ತಿಳಿದಿರಲಿಕ್ಕಿಲ್ಲ. ಕಿರುತೆರೆ ವೀಕ್ಷಕರ ಮನೆ ಮಗಳಾಗಿರುವ ಕಾವ್ಯಶ್ರೀಗೆ ಸಣ್ಣ ವಯಸ್ಸಿನಿಂದಲೂ ನಟಿಯಾಗಬೇಕು ಎಂಬುದೊಂದೇ ಕನಸು.

ಕಿರುತೆರೆ, ಹಿರಿತೆರೆಯಲ್ಲಿ ಮಿನುಗಬೇಕು ಎಂಬ ಮಹಾದಾಸೆ ಹೊಂದಿದ್ದ ಕಾವ್ಯಶ್ರೀಗೆ ಮನೆಯವರ ಪ್ರೋತ್ಸಾಹ ಇರಲೇ ಇಲ್ಲ. ಅದಕ್ಕೆ ಮನೆಯಲ್ಲಿ ಇದ್ದ ಸಾಂಪ್ರದಾಯಿಕ ವಾತಾವರಣವೇ ಕಾರಣ. ಪತ್ರಿಕೋದ್ಯಮ ಪದವಿ ಪಡೆದಿರುವ ಈಕೆಗೆ ಯಾವಾಗಲೂ ಬಣ್ಣದ ಲೋಕದ್ದೇ ಕನವರಿಕೆ. ನಟಿಯಾಗುವ ಅವಕಾಶ ಸಿಗದಿದ್ದಾಗ ಆಕೆ ನಿರೂಪಕಿಯಾಗೋಣ, ಹಾಗಾದರೂ ಬಣ್ಣದ ಜಗತ್ತಿನ ನಂಟು ಸಿಗುತ್ತದೆ ಎಂದು ಅಂದುಕೊಂಡರು. ಅಂತೂ ಇಂತು ನಿರೂಪಕಿಯಾಗುವ ಅವಕಾಶ ದೊರಕಿತು.

ನಿರೂಪಕಿಯಾಗಿದ್ದ ಕಾವ್ಯಶ್ರೀಗೆ ನಟನೆಯ ಮೇಲಿರುವ ಪ್ರೀತಿ ಕಡಿಮೆಯಾಗಿರಲಿಲ್ಲ. ಹಾಗಾಗಿ ನಿರೂಪಣೆಯ ನಡುವೆ ಇದ್ದಂತಹ ಆಡಿಶನ್ ಗಳಿಗೆ ಹೋಗಲಾರಂಭಿಸಿದ ಕಾವ್ಯಶ್ರೀಗೆ ಅದೃಷ್ಟ ದೇವತೆ ಕೈ ಹಿಡಿದಿದ್ದಳು. ಕಡೆಗೂ ನಟಿಯಾಗುವ ಅವಕಾಶ ಆಕೆಗೆ ಒಲಿಯಿತು.

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮನೆಯೇ ಮಂತ್ರಾಲಯ ಧಾರಾವಾಹಿಯಲ್ಲಿ ಸಣ್ಣ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದ ಕಾವ್ಯಶ್ರೀ ಎರಡನೇ ಧಾರಾವಾಹಿಯಲ್ಲಿ ನಾಯಕಿಯಾಗುವ ಅವಕಾಶ ಗಿಟ್ಟಿಸಿಕೊಂಡರು. ಮಂಗಳ ಗೌರಿಯಾಗಿ ಕರ್ನಾಟಕದಾದ್ಯಂತ ಗುರುತಿಸಿಕೊಂಡಿರುವ ಕಾವ್ಯಶ್ರೀಗೆ ಮೊದಲಿಗೆ ಆ ಪಾತ್ರ ಸಿಕ್ಕಾಗ ಸಹಜವಾಗಿ ಭಯವಾಗಿತ್ತು. ಆದರೆ ಸಹ ಕಲಾವಿದರುಗಳ ಪ್ರೋತ್ಸಾಹದಿಂದ ಮಂಗಳ ಗೌರಿಯಾಗಿ ಬದಲಾಗಲು ಸಾಧ್ಯವಾಯಿತು.

“ಪುಟ್ಟ ಗೌರಿ ಮದುವೆ ನನ್ನ ಇಷ್ಟದ ಧಾರಾವಾಹಿಗಳಲ್ಲೊಂದು. ಒಂದು ದಿನವೂ ತಪ್ಪದಂತೇ ನೋಡುತ್ತಿದ್ದ ಆ ಧಾರಾವಾಹಿಯು ವಿಭಿನ್ನ ರೀತಿಯ ಕಥಾ ಹಂದರವನ್ನು ಒಳಗೊಂಡಿದ್ದು ನಾನದನ್ನು ಇಷ್ಟಪಟ್ಟು ನೋಡುತ್ತಿದ್ದೆ. ಆದರೆ ಅದೇ ಧಾರಾವಾಹಿಯ ಮುಂದುವರಿದ ಭಾಗದಲ್ಲಿ ನಟಿಸುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ” ಎಂದು ಹೇಳುತ್ತಾರೆ ಕಾವ್ಯಶ್ರೀ.

“ಪುಟ್ಟ ಗೌರಿಯ ನಟನೆ ನೋಡಿದ್ದ ಕಿರುತೆರೆ ವೀಕ್ಷಕರು ಮಂಗಳ ಗೌರಿಯನ್ನು ಸ್ವೀಕರಿಸುತ್ತಾರಾ ಎಂಬ ಭಯ ನನಗಿತ್ತು. ಆದರೆ ಜನ ನನ್ನನ್ನು ಸ್ವೀಕರಿಸಿದ್ದಾರೆ, ಮನೆ ಮಗಳಾಗಿ ನನ್ನನ್ನು ಒಪ್ಪಿಕೊಂಡಿದ್ದಾರೆ ಎಂಬದಕ್ಕೆ ಕಲರ್ಸ್ ಅನುಬಂಧ ಅವಾರ್ಡ್ಸ್ ನಲ್ಲಿ ಮನೆ ಮೆಚ್ಚಿನ ಮಗಳು ಪ್ರಶಸ್ತಿ ಪಡೆದುದೇ ಉದಾಹರಣೆ” ಎಂದು ಸಂತಸ ವ್ಯಕ್ತಪಡುತ್ತಾರೆ ಕಾವ್ಯಶ್ರೀ.