• May 20, 2022

ಇದುವೇ ಪ್ರಶಾಂತ್ ನೀಲ್ ಮುಂದಿನ ಚಿತ್ರ!!!

ಇದುವೇ ಪ್ರಶಾಂತ್ ನೀಲ್ ಮುಂದಿನ ಚಿತ್ರ!!!

ಭಾರತದ ಪ್ರದೇಶಗಳಲ್ಲಿ ಕೆಜಿಎಫ್ ಎಂಬ ಒಂದು ಹೊಸ ಪ್ರದೇಶವೇ ಸೇರಿಹೋಗುವ ಮಾಡಿರುವ ನಿರ್ದೇಶಕ ಪ್ರಶಾಂತ್ ನೀಲ್ ಅವರು. ಅವರ ಸೃಷ್ಟಿಯ ‘ಕೆಜಿಎಫ್’ ಇದೀಗ ಪ್ರಪಂಚವನ್ನೇ ಆಳುತ್ತಿದೆ ಎಂದರೆ ತಪ್ಪಾಗದು. ಬಿಡುಗಡೆಯಾಗಿ ತಿಂಗಳು ಮುಗಿದು ಒಟಿಟಿ ಯಲ್ಲಿ ಕೂಡ ಲಭ್ಯವಾಗುತ್ತಿದ್ದರೂ, ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಸದ್ದಿಗೆ ಸೆಡ್ಡು ಹೊಡೆದವರೇ ಇಲ್ಲ. ಇದೀಗ ಪ್ರಶಾಂತ್ ನೀಲ್ ತಮ್ಮ ಮುಂದಿನ ಚಿತ್ರ ಯಾವುದೆಂಬುದನ್ನು ಘೋಷಿಸಿದ್ದಾರೆ.

ನಮ್ಮ ಕನ್ನಡದ ಹೆಮ್ಮೆ ಪ್ರಶಾಂತ್ ನೀಲ್ ಅವರ ಮುಂದಿನ ಚಿತ್ರ ನಿರ್ಧಾರವಾಗಿರುವುದು ಜೂನಿಯರ್ ಎನ್ಟಿಆರ್ ಅವರ ಜೊತೆ. ತೆಲುಗಿನ ಸೂಪರ್ ಸ್ಟಾರ್ ಜೂನಿಯರ್ ಎನ್ಟಿಆರ್ ಅವರಿಗೆ ಇಂದು ಜನುಮದಿನದ ಸಂಭ್ರಮ. ಇದೇ ಕಾರಣಕ್ಕೆ ಇಂದು ಅವರ ಮುಂದಿನ ಎರಡು ಚಿತ್ರಗಳು ಘೋಷಣೆಯಾಗಿವೆ. ಕೊರಟಾಲ ಶಿವ ಅವರ ನಿರ್ದೇಶನದಲ್ಲಿ ಎನ್ಟಿಆರ್ ಅವರ 30ನೇ ಚಿತ್ರ ಮೂಡಿಬರಲಿದ್ದು, ಅವರ 31ನೇ ಚಿತ್ರಕ್ಕೆ ಪ್ರಶಾಂತ್ ನೀಲ್ ಅವರು ಸೂತ್ರಧಾರಿ.

‘ಮೈತ್ರಿ ಮೂವೀಸ್’ ಅವರ ನಿರ್ಮಾಣದಲ್ಲಿ ಈ ನೀಲ್-ಎನ್ಟಿಆರ್ ಜೋಡಿಯ ಚಿತ್ರ ಮೂಡಿಬರಲಿದ್ದು, ಸದ್ಯಕ್ಕೆ ‘#NTR31’ ಎಂದು ಕರೆಯಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಇನ್ನು ಹೊರಬಿದ್ದಿಲ್ಲ. ಕೊರಟಾಲ ಶಿವ ಅವರ ಜೊತೆಗಿನ ಚಿತ್ರದ ನಂತರ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. 2023ರ ಏಪ್ರಿಲ್ ನಿಂದ ಚಿತ್ರಕರಣದ ವೇಳಾಪಟ್ಟಿ ಹಾಕಲಾಗಿದ್ದು, ಕಾದುನೋಡಬೇಕಿದೆ. ತಮ್ಮ ತಮ್ಮ ಟ್ವಿಟ್ಟರ್ ಖಾತೆಗಳಲ್ಲಿ ಮೈತ್ರಿ ಮೂವೀಸ್, ಜೂನಿಯರ್ ಎನ್ಟಿಆರ್ ಹಾಗು ಪ್ರಶಾಂತ್ ನೀಲ್ ಅವರು ಪೋಸ್ಟರ್ ಹಂಚಿಕೊಳ್ಳುವುದರ ಮೂಲಕ ಅಧಿಕೃತ ಘೋಷಣೆ ಮಾಡಿದ್ದಾರೆ.

‘ಉಗ್ರಂ’ ಚಿತ್ರದಿಂದ ಸ್ಯಾಂಡಲ್ವುಡ್ ನಲ್ಲಿ ತಮ್ಮ ಪಯಣ ಆರಂಭಿಸಿದ ಕನ್ನಡಿಗ ಪ್ರಶಾಂತ್ ನೀಲ್ ಅವರು ನಂತರ ನೀಡಿದ್ದು ‘ಕೆಜಿಎಫ್’ ಅನ್ನು. ಎರಡೂ ಅಧ್ಯಾಯಗಳು ಇದೀಗ ಬಿಡುಗಡೆಗೊಂಡು ಎಲ್ಲರ ಮನಗೆದ್ದಿವೆ. ‘ಹೊಂಬಾಳೆ ಫಿಲಂಸ್’ ಸಂಸ್ಥೆಯೊಂದಿಗೆ ರೆಬೆಲ್ ಸ್ಟಾರ್ ಪ್ರಭಾಸ್ ಅವರಿಗೆ ‘ಸಲಾರ್’ ಎಂಬ ಚಿತ್ರವನ್ನು ಸದ್ಯ ಪ್ರಶಾಂತ್ ನೀಲ್ ಮಾಡುತ್ತಿದ್ದು, ಬಹುಪಾಲು ಚಿತ್ರೀಕರಣ ಮುಗಿಸಿದ್ದಾರೆ. ಈ ನಡುವೆ ಎಲ್ಲ ಸಿನಿಪ್ರೇಕ್ಷಕರಲ್ಲಿ ಇದ್ದಂತ ಪ್ರಶ್ನೆ, ‘ಸಲಾರ್’ ನಂತರ ಮುಂದೇನು? ಶ್ರೀಮುರುಳಿ ಅವರೊಂದಿಗೆ ನೀಲ್ ಮುಂದಿನ ಚಿತ್ರ ಎನ್ನಲಾಗಿತ್ತು. ಆದರೆ ಶ್ರೀಮುರುಳಿ ಅವರ ಮುಂದಿನ ಚಿತ್ರ ‘ಭಘೀರಾ’ ಚಿತ್ರಕ್ಕೆ ತಮ್ಮ ಕಥೆ ಕೊಟ್ಟು, ಶಾಂತವಾಗಿದ್ದಾರೆ ನೀಲ್. ಇಂದು ಅವರ ಮುಂದಿನ ಚಿತ್ರದ ಬಗ್ಗೆ ಸ್ವತಃ ನೀಲ್ ಪೋಸ್ಟರ್ ಒಂದರ ಮೂಲಕ ತಿಳಿಸಿದ್ದಾರೆ. ಪ್ರಶಾಂತ್ ನೀಲ್ ಅವರ ಈ ಲೈನ್ ಅಪ್ ಅಭಿಮಾನಿಗಳಲ್ಲಿ ಸಂತಸ ತಂದಿದೆ.