- July 14, 2022
‘ವಿಕ್ರಮ್’ ಸಿನಿಮಾ ಹಾಡಿಹೊಗಳಿದ ಪ್ರಶಾಂತ್ ನೀಲ್.


ತಮಿಳಿನ ಖ್ಯಾತ ನಟ, ಭಾರತ ಚಿತ್ರರಂಗದ ಸ್ವಂತರಾಗಿರುವ ಕಮಲ್ ಹಾಸನ್ ಅವರ ನಟನೆಯ ಸಿನಿಮಾ ‘ವಿಕ್ರಮ್’ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿತ್ತು. ತೆರೆಕಂಡು ಒಂದು ತಿಂಗಳು ಕಳೆದರೂ, ಒಟಿಟಿ ಪರದೆ ಮೇಲೆ ಬಂದಮೇಲೂ ಕೂಡ ಈಗಲೂ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಪಡೆಯುತ್ತಿದೆ. ಚಿತ್ರ ಹಾಲಿವುಡ್ ಮಟ್ಟದಲ್ಲಿದೆ ಎಂಬಂತಹ ಮಾತುಗಳನ್ನೂ ಸೇರಿ, ಎಲ್ಲೆಡೆಯಿಂದ ಪ್ರಶಂಸೆ ಪಡೆಯುತ್ತಿರುವ ‘ವಿಕ್ರಮ್’ ಸಿನಿಮಾದ ಬಗೆಗೆ, ಕನ್ನಡಿಗ, ಕೆಜಿಎಫ್ ಸೃಷ್ಟಿಕರ್ತ ಪ್ರಶಾಂತ್ ನೀಲ್ ಅವರು ಮೆಚ್ಚುಗೆಯ ಮಾತುಗಳನ್ನು ಹೊರಹಾಕಿದ್ದಾರೆ.






ಲೋಕೇಶ್ ಕಣಗರಾಜ್ ಅವರ ನಿರ್ದೇಶನದ ‘ವಿಕ್ರಮ್’ ಸಿನಿಮಾ ಒಂದು ಆಕ್ಷನ್ ಡ್ರಾಮಾ ರೀತಿಯ ಕಥೆ. ಈ ಚಿತ್ರದ ಬಗ್ಗೆ ಪ್ರಶಾಂತ್ ನೀಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು, “ವಿಕ್ರಮ್ ಸಿನಿಮಾತಂಡದವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗು ಫಹಾದ್ ಫಾಸಿಲ್ ಅವರನ್ನು ಒಂದೇ ತೆರೆಮೇಲೆ ನೋಡುವುದು ಹಬ್ಬವಾಗಿತ್ತು. ಲೋಕೇಶ್ ಅವರ ನಿರ್ದೇಶನಕ್ಕೆ ನಾನು ಅಭಿಮಾನಿ. ಹಾಗು ಅನ್ಬರಿವು ಅವರ ಕೆಲಸ ಕೂಡ ಉತ್ತಮವಾಗಿತ್ತು. ಜೊತೆಗೆ ‘ರೋಲೆಕ್ಸ್’ ಪಾತ್ರ ತಲೆಯಲ್ಲೇ ಕೂತಿದೆ. ಸೂರಿಯ ಅವರ ನಟನೆ ಅಧ್ಭುತ” ಎಂದು ಬರೆದುಕೊಂಡಿದ್ದಾರೆ.






ವಿಶೇಷವೆಂದರೆ, ‘ವಿಕ್ರಮ್’ ಚಿತ್ರದ ಮೂಲಕ ಲೋಕೇಶ್ ಕಣಗರಾಜ್ ಅವರು ತಮ್ಮದೇ ಒಂದು ಸಿನಿಮಾಟಿಕ್ ಯೂನಿವರ್ಸ್ ಅನ್ನು ಸೃಷ್ಟಿಸಲು ಹೊರಟಿದ್ದಾರೆ. 2019ರಲ್ಲಿ ಬಿಡುಗಡೆಯಾಗಿದ್ದ ಅವರದೇ ನಿರ್ದೇಶನದಲ್ಲಿ ಕಾರ್ತಿ ಅವರು ನಟಿಸಿರುವ ‘ಕೈಥಿ’ ಸಿನಿಮಾದ ಹಲವು ಅಂಶಗಳನ್ನು ‘ವಿಕ್ರಮ್’ ಸಿನಿಮಾದಲ್ಲಿ ಮುಂದುವರೆಸಿಕೊಂಡು ಬಂದಿದ್ದು, ಚಿತ್ರದ ಕೊನೆಯಲ್ಲಿ ಕಮಲ್ ಹಾಸನ್ ಅಕಾ ‘ವಿಕ್ರಮ್’, ಕಾರ್ತಿಯ ‘ದಿಲ್ಲಿ’, ಫಹಾದ್ ಫಾಸಿಲ್ ಅವರ ‘ಅಮರ್’, ಸೂರಿಯ ಅವರ ‘ರೋಲೆಕ್ಸ್’ ಸೇರಿದಂತೆ ಹಲವು ಪಾತ್ರಗಳ ಕಥೆಯನ್ನು ಮುಂದುವರೆಸಿಕೊಂಡು ಹೋಗುವ ಸುಳಿವು ನೀಡಿದ್ದಾರೆ.










ಇದಕ್ಕೆ ಅಭಿಮಾನಿಗಳು ‘ಲೋಕಿವರ್ಸ್’ ಎಂಬ ಹೆಸರನ್ನೂ ಇಟ್ಟಿದ್ದಾರೆ. ಇತ್ತ ಕಡೆ ಪ್ರಶಾಂತ್ ನೀಲ್ ಅವರು ಕೂಡ ‘ಕೆಜಿಎಫ್’ ಸರಣಿ ಚಿತ್ರಗಳು, ‘ಸಲಾರ್’ ಹಾಗು ಜೂನಿಯರ್ ಎನ್ಟಿಆರ್ ನಟನೆಯ ಇನ್ನೂ ಹೆಸರಿಡದ ಸಿನಿಮಾಗಳನ್ನು ಸೇರಿಸಿ ತಮ್ಮ ಸಿನಿಮಾಟಿಕ್ ಯೂನಿವರ್ಸ್ ಮಾಡಹೊರಟಿದ್ದಾರೆ. ಇದನ್ನೂ ‘ನೀಲ್ ವರ್ಸ್’ ಅಥವಾ ‘ಕೆಜಿಎಫ್ ವರ್ಸ್’ ಎಂದೂ ಕರೆಯಲಾಗುತ್ತಿದೆ. ಹಾಗಾಗಿ ಈ ಇಬ್ಬರು ನಿರ್ದೇಶಕರ ಮೇಲೆ ಭಾರತದಾದ್ಯಂತದ ಸಿನಿಪ್ರೇಮಿಗಳ ಕಣ್ಣಿದೆ. ಇವರಿಬ್ಬರು ಒಬ್ಬರನ್ನೊಬ್ಬರು ಪರಸ್ಪರ ಮೆಚ್ಚಿಕೊಳ್ಳುತ್ತಿರುವುದು ಸಂತಸ ನೀಡಿದೆ.


