• April 13, 2022

ಶ್ರೀಮುರಳಿ ಜೊತೆ ಪ್ರಶಾಂತ್ ನೀಲ್

ಶ್ರೀಮುರಳಿ ಜೊತೆ ಪ್ರಶಾಂತ್ ನೀಲ್

ಉಗ್ರಂ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಮೂಡಿಸಿದ ನಿರ್ದೇಶಕ ಪ್ರಶಾಂತ್ ನೀಲ್ ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಜಗತ್ತಿಗೆ ಪರಿಚಯಿಸಿದರು. ಈಗ ಕೆಜಿಎಫ್ 2 ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ಇದರ ಬಿಡುಗಡೆಗೆ ಮುನ್ನವೇ ಪ್ರಶಾಂತ್ ದಕ್ಷಿಣ ಭಾರತದ ಖ್ಯಾತ ನಟರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ ಅವರೊಂದಿಗೆ ಸಲಾರ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ ಪ್ರಶಾಂತ್ ಇನ್ನು ಕನ್ನಡದಲ್ಲಿ ಕೆಲಸ ಮಾಡುವುದಿಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಈ ಊಹಾಪೋಹಗಳಿಗೆ ಪ್ರಶಾಂತ್ ಉತ್ತರ ನೀಡಿದ್ದಾರೆ.

ಕೆಜಿಎಫ್ ಪ್ರಚಾರದಲ್ಲಿ ಅವರಿಗೆ ಕನ್ನಡದಲ್ಲಿ ನಿರ್ದೇಶನ ಮಾಡುವುದಿಲ್ಲವೇ ಎಂಬ ಪ್ರಶ್ನೆ ಕೇಳಿ ಬಂದಿತ್ತು. ಇದಕ್ಕೆ ಪ್ರಶಾಂತ್ ” ನಾನು ಕನ್ನಡಿಗ. ಕನ್ನಡದಲ್ಲಿ ಸಿನಿಮಾ ಮಾಡುತ್ತೇನೆ. ಇದು ನನ್ನ ಕರ್ತವ್ಯ. ನಾನು ಎಲ್ಲಿಯೇ ಹೋದರೂ ಕನ್ನಡಿಗ. ವಾಪಾಸು ಬಂದು ಕನ್ನಡ ಸಿನಿಮಾ ಮಾಡಲೇಬೇಕು ಇದು ನನ್ನ ಆಸೆ. ಈಗ ನನಗೆ ಅವಕಾಶಗಳು ದೊರೆತಿವೆ. ಕೆಜಿಎಫ್ ರಿಲೀಸ್ ಆದ ಬಳಿಕ ನನ್ನನ್ನು ಹಲವು ಜನ ಸಂಪರ್ಕಿಸಿದರು. ಅವರು ನನ್ನ ಮೇಲೆ ತುಂಬಾ ಪ್ರೀತಿ , ಗೌರವ ತೋರಿದ್ದರು.ನನಗೆ ನನ್ನ ವೃತ್ತಿ ಬದುಕು ಬೆಳವಣಿಗೆ ಕಾಣಬೇಕಿದೆ.ಹೀಗಾಗಿ ನನ್ನ ವೃತ್ತಿಯಲ್ಲಿ ನಾನು ಮುಂದಿನ ಹೆಜ್ಜೆ ಇಡಬೇಕಿತ್ತು. ಹೀಗಾಗಿ ಪರಭಾಷೆಯ ಸಿನಿಮಾ ಒಪ್ಪಿಕೊಂಡೆ” ಎಂದಿದ್ದಾರೆ.

“ನಾನು ಕನ್ನಡ ಸಿನಿಮಾಗಳನ್ನು ಮಾಡುತ್ತೇನೆ. ಶ್ರೀಮುರಳಿ ಅವರೊಂದಿಗೆ ಒಂದು ಸಿನಿಮಾ ಮಾಡುತ್ತೇನೆ ಎಂದು ಅವರಿಗೆ ಮಾತು ಕೊಟ್ಟಿದ್ದೇನೆ. ಕನ್ನಡ ಸಿನಿಮಾ ಮಾಡಲು ಯೋಜನೆ ರೂಪಿಸಿಕೊಂಡಿದ್ದೇನೆ” ಎಂದಿದ್ದಾರೆ.

ಸದ್ಯ ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿರುವ ಪ್ರಶಾಂತ್ ತೆಲುಗಿನ ಜೂನಿಯರ್ ಎನ್ ಟಿಆರ್ , ರಾಮ್ ಚರಣ್ ,ಅಲ್ಲು ಅರ್ಜುನ್ ಮುಂತಾದ ನಟರೊಂದಿಗೆ ಸಿನಿಮಾ ಮಾಡಲಿದ್ದಾರೆ.