• June 11, 2022

ರಾಕಿಂಗ್ ಸ್ಟಾರ್ ಗೆ ಪೂಜಾ ಹೆಗ್ಡೆ ನಾಯಕಿ??

ರಾಕಿಂಗ್ ಸ್ಟಾರ್ ಗೆ ಪೂಜಾ ಹೆಗ್ಡೆ ನಾಯಕಿ??

ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಪ್ರಪಂಚದಾದ್ಯಂತ ಅಭಿಮಾನಿಬಳಗವನ್ನು ಹೆಚ್ಚಿಸಿಕೊಂಡಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಎಲ್ಲೆಡೆ ‘ರಾಕಿ ಭಾಯ್’ ಎಂದೇ ಕರೆಸಿಕೊಳ್ಳುತ್ತಾ ಜನರ ಮನದಲ್ಲಿ ಅದೇ ಹೆಸರಿನಿಂದ ಅಚ್ಚಾಗಿ ಉಳಿದಿದ್ದಾರೆ. ಕೆಜಿಎಫ್ ಚಿತ್ರಗಳ ಯಶಸ್ಸಿನ ನಂತರ ಯಶ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಬಗ್ಗೆ ಅಧಿಕೃತವಾದ ಘೋಷಣೆ ಎಲ್ಲಿಯೂ ಹೊರಬೀಳದಿದ್ದರೂ, ಒಂದಷ್ಟು ನಿಜಕ್ಕೆ ಸನಿಹವಾದ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ.

ಯಶ್ ತಮ್ಮ 19ನೇ ಸಿನಿಮಾಗಾಗಿ ಕನ್ನಡದ ‘ಮಫ್ತಿ’ ಸಿನಿಮಾ ಖ್ಯಾತಿಯ ನಿರ್ದೇಶಕರಾದ ನರ್ತನ್ ಅವರೊಂದಿಗೆ ಕೈಜೋಡಿಸುವುದು ಬಹುತೇಕ ಖಾತ್ರಿಯಾಗಿದೆ. ಚಿತ್ರದ ಬಗೆಗಿನ ಹೆಚ್ಚಿನ ವಿಚಾರ ಇನ್ನು ತಿಳಿಯದಿದ್ದರೂ, ಯಶ್ ಅಥವಾ ‘ಕೆ ವಿ ಎನ್ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂಬ ಊಹೆಯಿದೆ. ಸದ್ಯ ಈ ಸಿನಿಮಾಗೆ ತೆಲುಗಿನ ಬಹುಬೇಡಿಕೆಯ ನಟಿ ಪೂಜಾ ಹೆಗ್ಡೆ ಅವರನ್ನು ನಾಯಕಿಯಾಗಿ ನಟಿಸಲು ಕೇಳಲಾಗುತ್ತಿದೆಯಂತೆ.

ಸದ್ಯ ತೆಲುಗಿನಲ್ಲಿ ಅತ್ಯಂತ ಬ್ಯುಸಿ ಹಾಗು ಅತ್ಯಂತ ಬೇಡಿಕೆಯಿರುವ ನಟಿಯರಲ್ಲಿ ಪೂಜಾ ಹೆಗ್ಡೆ ಮುಂಚೂಣಿಯಲ್ಲಿದ್ದಾರೆ. ತೆಲುಗು ಮಾತ್ರವಲ್ಲದೆ ಹಿಂದಿ ಹಾಗು ತಮಿಳು ಸಿನಿಮಾಗಳಲ್ಲೂ ನಟಿಸಿರುವ ಇವರು, ಸದ್ಯ ಯಶ್ ಅವರ ಚಿತ್ರದಿಂದ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ. ನಿರ್ದೇಶಕ ನರ್ತನ್ ಅವರು ಈ ಬಗ್ಗೆ ಪೂಜಾ ಹೆಗ್ಡೆ ಅವರ ಬಳಿ ಮಾತನಾಡಿದ್ದು, ಪೂಜಾ ಅವರು ಕೂಡ ಅತಿ ಆಸಕ್ತರಾಗಿದ್ದಾರಂತೆ. ಆದರೆ ಅಧಿಕೃತ ಒಪ್ಪಂದವಾಗಲಿ, ಘೋಷಣೆಯಾಗಲಿ ಇನ್ನಷ್ಟೇ ಆಗಬೇಕಿದೆ.