- June 24, 2022
“ಪೆಟ್ರೋಮ್ಯಾಕ್ಸ್”ಗೆ ನಿಗದಿಯಾಯ್ತು ದಿನಾಂಕ.


“ನೀರ್ ದೋಸೆ’ ಸಿನಿಮಾ ಹಲವು ವಿಧದ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದ ಸಿನಿಮಾ. ಡಬಲ್ ಮೀನಿಂಗ್ ಡೈಲಾಗ್ ಗಳು, ಹಾಗು ಸನ್ನಿವೇಶಗಳ ಮೂಲಕ ಜೀವನದ ಸೂಕ್ಷ್ಮ ಸತ್ಯಗಳನ್ನು, ನೀತಿಪಾಠಗಳನ್ನು ಹೇಳಿದಂತಹ ಚಿತ್ರ ಅದು. ಈಗ ಅದೇ ನಿರ್ದೇಶಕರಾದ ವಿಜಯ್ ಪ್ರಸಾದ್ ಅವರು ನೀನಾಸಮ್ ಸತೀಶ್ ಅವರ ಜೊತೆಗೆ ಹೊಸ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಅದುವೇ ‘ಪೆಟ್ರೋಮ್ಯಾಕ್ಸ್’. ಸದ್ಯ ಈ ಸಿನಿಮಾದ ಬಿಡುಗಡೆ ದಿನಾಂಕ ಖಾತ್ರಿಯಾಗಿದೆ.


ನೀನಾಸಮ್ ಸತೀಶ್ ಹಾಗು ಹರಿಪ್ರಿಯಾ ಜೋಡಿಯಾಗಿ ನಟಿಸುತ್ತಿರುವ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೈಲರ್ 2021ರ ಸೆಪ್ಟೆಂಬರ್ ನಲ್ಲೆ ಬಿಡುಗಡೆಯಾಗಿತ್ತು. ಟ್ರೈಲರ್ ನೋಡಿದ ಪ್ರತಿಯೊಬ್ಬರಿಗೂ ಇದು ಕೂಡ ‘ನೀರ್ ದೋಸೆ’ ರೀತಿಯದೆ ಸಿನಿಮಾ ಆಗಿರಲಿದೆ ಎಂಬುದು ಖಾತ್ರಿಯಾಗಿತ್ತು. ಇದೀಗ ಈ ಸಿನಿಮಾ ಇದೇ ಜುಲೈ 15ರಂದು ಬಿಡುಗಡೆಯಾಗುತ್ತಿದೆ. ಜೂನ್ 20ರಂದು ಸತೀಶ್ ಅವರ ಜನುಮದಿನ ಆಚರಿಸಿಕೊಳ್ಳುತ್ತಾ ಈ ರಿಲೀಸ್ ಡೇಟ್ ಅನ್ನು ಅಧಿಕೃತವಾಗಿ ಘೋಷಣೆಮಾಡಿದೆ ಚಿತ್ರತಂಡ. ಸ್ವತಃ ಸತೀಶ್ ನೀನಾಸಂ ಅವರು ತಮ್ಮ ‘ಸತೀಶ್ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ‘ಸ್ಟುಡಿಯೋ 18’ ಜೊತೆಗೆ ಕೈ ಜೋಡಿಸಿ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.




ಚಿತ್ರದಲ್ಲಿ ಸತೀಶ್ ಹಾಗು ಹರಿಪ್ರಿಯಾ ಜೊತೆಗೆ, ಕಾರುಣ್ಯ ರಾಮ್, ನಾಗಭೂಷಣ, ಮುಂತಾದ ಪ್ರತಿಭಾವಂತ ನಟರು ಬಣ್ಣ ಹಚ್ಚಿದ್ದಾರೆ. ಕಥೆಯಲ್ಲಿ ಡೆಲಿವರಿ ಬಾಯ್ ಒಬ್ಬನ ಪಾತ್ರಕ್ಕೆ ಜೀವ ತುಂಬಿದ್ದಾರೆ ಸತೀಶ್. ಅನೂಪ್ ಸೀಳಿನ್ ಅವರ ಸಂಗೀತ ಚಿತ್ರದಲ್ಲಿರಲಿದ್ದು, ಮತ್ತೊಂದು ಹೊಟ್ಟೆ ಹುಣ್ಣಾಗಿಸುವಷ್ಟು ಹಾಸ್ಯ ನೀಡೋ ಚಿತ್ರಕ್ಕೆ ಕನ್ನಡ ಸಿನಿರಸಿಕರು ಕಾಯುತ್ತಿದ್ದಾರೆ. ಇದೇ ಜುಲೈ 15ರಿಂದ ಸಿನಿಮಾ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.








