- July 7, 2022
ಅದೃಷ್ಟ ತಂದ ಚಾರ್ಲಿ…ಶ್ವಾನಗಳಿಗೀಗ ಡಿಮ್ಯಾಂಡಪ್ಪೋ ಡಿಮ್ಯಾಂಡು!


777 ಚಾರ್ಲಿ ಎಂದರೆ ಬಹುಶಃ ಈಗ ತಿಳಿಯದವರಿಲ್ಲ. ತನ್ನ ಮುಗ್ಧ ಅಭಿನಯದಿಂದ ಎಲ್ಲೆಡೆ ಮನೆಮಾತಾಗಿರುವ ಚಾರ್ಲಿ ಈಗಂತೂ ಎಲ್ಲರ ನೆಚ್ಚಿನ ಹೀರೋಯಿನ್. ಎಲ್ಲ ಶ್ವಾನಪ್ರಿಯರ ಆಕರ್ಷಣಾ ಕೇಂದ್ರಬಿಂದುವಾಗಿರುವ ಚಾರ್ಲಿಗೆ ನೆರೆರಾಜ್ಯಗಳಿಂದಲೂ ಸಿನಿಮಾದಲ್ಲಿ ಅಭಿನಯಿಸುವಂತೆ ಡಿಮ್ಯಾಂಡ್ ಸೃಷ್ಟಿಯಾಗಿದೆ ಎಂದರೆ ನೀವು ನಂಬಲೇಬೇಕು.


ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ777’ ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶದಾದ್ಯಂತ ಹೊಸದಾದ ಅಲೆ ಸೃಷ್ಟಿಸಿದೆ. ಶ್ವಾನದ ಸುತ್ತ ಹೆಣೆದಿರುವ ನಿಷ್ಕಲ್ಮಶ ಪ್ರೀತಿಯ ಈ ಕಥೆ ಬೆಸ್ಟ್ ಫ್ಯಾಮಿಲಿ ಎಂಟರ್ಟೈನರ್ ಅನ್ನುವುದರಲ್ಲಿ ಸಂಶಯವಿಲ್ಲ. ಅಂದಹಾಗೆ 777 ಚಾರ್ಲಿಯಲ್ಲಿ ನಟಿಸಿರುವ ಈ ಶ್ವಾನದ ಊರು ಸಾಂಸ್ಕೃತಿಕ ನಗರಿ ಮೈಸೂರು. ಚಾರ್ಲಿಗೆ ತರಬೇತಿ ನೀಡಿದ ಪ್ರಮೋದ್ ಕೂಡ ಮೈಸೂರಿನ ಸಾಲುಂಡಿಯವರು. ಇವರು 22 ಶ್ವಾನಗಳನ್ನೊಳಗೊಂಡ ಡಿಕೆ9 ವರ್ಕಿಂಗ್ ಡಾಗ್ ಟ್ರೈನಿಂಗ್ ಸ್ಕೂಲ್ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಬರುವ ಚಿಕ್ಕ ಹಾಗೂ ದೊಡ್ಡ ಎರಡು ವಯಸ್ಸಿನ ಶ್ವಾನವನ್ನು ತರಬೇತಿ ನೀಡಿ ಉತ್ತಮ ಅಭಿನಯ ಹೊರಹೊಮ್ಮುವಂತೆ ಮಾಡಿದವರು ಪ್ರಮೋದ್.


ನಾಯಿಯ ಸುತ್ತ ಕಥೆ ಕಟ್ಟಲು ಹೊರಟಿದ್ದ ನಿರ್ದೇಶಕ ಕಿರಣ್ ರಾಜ್ ಅವರಿಗೆ ಅಭಿನಯದಿಂದಲೇ ಎಲ್ಲರನ್ನು ಆಕರ್ಷಿಸುವ ಶ್ವಾನವೊಂದು ಬೇಕಿತ್ತು.bಸಾಕಷ್ಟು ಆಡಿಶನ್ ಗಳನ್ನು ನಡೆಸಿದರೂ ಶ್ವಾನ ಸಿಗದೇ ಇದ್ದಾಗ ಕೊನೆಗೆ ‘ಕವಲುದಾರಿ’ ನಿರ್ದೇಶಕ ಹೇಮಂತ್ ಅವರ ಸಲಹೆ ಮೇರೆಗೆ ಕಿರಣ್ ರಾಜ್ ಅವರು ಪ್ರಮೋದ್ ರನ್ನು ಸಂಪರ್ಕಿಸಿದರು. ಮುಂದೆ ನಡೆದದ್ದೆಲ್ಲಾ ಅದ್ಭುತವೆಂಬಂತೆ ಇತಿಹಾಸದ ಪುಟ ಸೇರಿತು. ಚಾರ್ಲಿ ಎಲ್ಲರ ಮನೆ ಮಾತಾಯಿತು.


ಪ್ರಮೋದ್ ಎಂದಿಗೂ ಡಾಗ್ ಟ್ರೈನರ್ ಆಗಬೇಕು ಎಂದುಕೊಂಡವರಲ್ಲ. ಅವರಿಗೆ ಮೊದಲಿನಿಂದಲೂ ಸಿವಿಲ್ ಆಫೀಸರ್ ಆಗಬೇಕೆನ್ನುವ ಹಂಬಲವಿತ್ತು. ಆದರೆ ಅದು ಸಾಧ್ಯವಾಗದಿದ್ದಾಗ ಹೇಗೂ ಶ್ವಾನಪ್ರಿಯ ರಾಗಿದ್ದ ಪ್ರಮೋದ್ ಇದನ್ನೇ ತನ್ನ ವೃತ್ತಿಯನ್ನಾಗಿ ಆಯ್ದುಕೊಂಡರು. ಒಟ್ಟಿನಲ್ಲಿ ಪ್ರಮೋದ್ ಬಯಸಿದ್ದೇ ಬೇರೆ ನಡೆಸಿದ ವೃತ್ತಿಯೇ ಬೇರೆ. ಸದ್ಯ ಜರ್ಮನಿ ತಜ್ಞರಿಂದ ಪ್ರಮಾಣ ಪತ್ರ ಪಡೆದಿರುವ ಪ್ರಮೋದ್ ಶ್ವಾನಗಳ ವರ್ತನೆ, ಮನೋವಿಜ್ಞಾನದ ಬಗ್ಗೆ ಸಾಕಷ್ಟು ವಿಚಾರಗಳನ್ನು ಅರಿತುಕೊಂಡಿದ್ದಾರೆ.


ಚಾರ್ಲಿ ಬಗ್ಗೆ ಮಾತನಾಡಿದ ಪ್ರಮೋದ್ ಸರಿಯಾದ ತರಬೇತಿ ನೀಡಿದ ನಂತರವೇ ಚಾರ್ಲಿಯನ್ನು ಅಭಿನಯಕ್ಕಿಳಿಸಲಾಗುತ್ತಿತ್ತು. ಕಾಶ್ಮೀರದಲ್ಲಿ ಕ್ಲೈಮಾಕ್ಸ್ ದೃಶ್ಯಕ್ಕೂ ಮುನ್ನ 10 ದಿನಗಳ ಕಾಲ ಮಂಜುಗಡ್ಡೆಗಳ ನಡುವೆ ತರಬೇತಿ ಪಡೆದಿದ್ದಾಳೆ. ಯಾವುದೇ ಪ್ರಾಣಿ ಇರಲಿ ಮೊದಲು ಅವರಿಗೆ ಪ್ರೀತಿ ನೀಡಬೇಕು ಮತ್ತು ವಿಶ್ವಾಸ ಸಂಪಾದಿಸಬೇಕು.ಆಗ ಮಾತ್ರ ಅವು ನಾವು ಹೇಳಿದಂತೆ ಕೇಳುತ್ತವೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಚಾರ್ಲಿ ಎಷ್ಟೇ ಜನದಟ್ಟಣೆ ಇದ್ದರೂ ಸ್ವಲ್ಪವೂ ಹೆದರದೇ ಶೂಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಳು” ಎನ್ನುತ್ತಾರೆ.


ಸದ್ಯ ಚಾರ್ಲಿಗೆ ಕನ್ನಡ ಮಾತ್ರವಲ್ಲದೆ ನೆರೆರಾಜ್ಯದ ಸಿನಿಮಾ ಇಂಡಸ್ಟ್ರಿಯಿಂದಲೂ ಡಿಮ್ಯಾಂಡ್ ಶುರುವಾಗಿದೆ. ಚಾರ್ಲಿ ತನ್ನ ಅಭಿನಯದ ಮೂಲಕ ತನ್ನ ಸ್ನೇಹಿತರಿಗೂ ನಟಿಸುವ ಅವಕಾಶವನ್ನು ನೀಡಿದ್ದಾಳೆ. ಈಗಾಗಲೇ ಡಾಲಿ ಧನಂಜಯ್ ಅಭಿನಯಿಸುತ್ತಿರುವ ‘ಹೊಯ್ಸಳ’ ಸಿನಿಮಾಕ್ಕೆ ಪ್ರಮೋದ್ 5 ಅಪರೂಪದ ಬೆಲ್ಜಿಯನ್ ಮ್ಯಾಲಿನಾಯಿಸ್ ಶ್ವಾನಗಳನ್ನು ನೀಡಿದ್ದಾರೆ. ಅಷ್ಟೇ ಅಲ್ಲದೆ ತೆಲುಗು, ಮಲಯಾಳಂ ಸಿನಿಮಾದಲ್ಲೂ ನಟಿಸಲು ಪ್ರಮೋದ್ ಅವರ ಕೇಂದ್ರದ ಶ್ವಾನಗಳಿಗೆ ಅವಕಾಶ ಒದಗಿ ಬಂದಿರುವುದು ಸಂತೋಷದ ವಿಚಾರ.


ಒಟ್ಟಿನಲ್ಲಿ ಶ್ವಾನ ಪ್ರೇಮಕ್ಕೆ ಹೊಸ ಕೀರ್ತಿ ತಂದ ಚಾರ್ಲಿಗೂ 777 ಚಾರ್ಲಿಯ ಭಾಗವಾಗಿರುವ ಪ್ರತಿಯೊಬ್ಬರಿಗೂ ಇನ್ನಷ್ಟು ಯಶಸ್ಸು ಸಿಗಲೆಂದು ಆಶಿಸೋಣ.




