• July 21, 2022

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

ಹೊಸ ನಟರನ್ನ ಸ್ವಾಗತಿಸಿದ ‘ಪರಮ್ ವಾಹ್’ ಕುಟುಂಬ.

ರಕ್ಷಿತ್ ಶೆಟ್ಟಿ ಅವರ ನೇತೃತ್ವದ ‘ಪರಮ್ ವಾಹ್ ಸ್ಟುಡಿಯೋಸ್’ ಕನ್ನಡಕ್ಕೆ ವಿಭಿನ್ನ ಸಿನಿಮಾಗಳನ್ನ ನೀಡಿರುವಂತಹ ಸಿನಿಮಾ ನಿರ್ಮಾಣ ಸಂಸ್ಥೆ. ಹಲವು ಹೊಸ ಪ್ರತಿಭೆಗಳಿಗೆ ಮೆಟ್ಟಿಲಾಗಿ, ಹೊಸ ರೀತಿಯ ಸಿನಿಮಾಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇದೀಗ ಹೊಸದೊಂದು ಚಿತ್ರಕ್ಕೆ ‘ಪರಮ್ ವಾಹ್ ಸ್ಟುಡಿಯೋಸ್’ ಕೈ ಹಾಕಿದ್ದು ಚಿತ್ರದ ನಾಯಕ ಹಾಗು ನಾಯಕಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಬರವಣಿಗೆ ತಂಡವಾದ ‘ಸೆವೆನ್ ಓಡ್ಸ್’ ಹಲವು ಉತ್ತಮ ಕಥೆಗಳಿಗೆ ಕಾರಣವಾಗಿದ್ದಾರೆ. ಸದ್ಯ ಅದೇ ತಂಡದ ಸದಸ್ಯರು ಸಿನಿಮಾ ನಿರ್ದೇಶನದತ್ತ ಮುಖ ಮಾಡುತ್ತಿದ್ದಾರೆ. ಅದು ಕೂಡ ‘ಪರಮ್ ವಾಹ್ ಸ್ಟುಡಿಯೋಸ್’ ನಿರ್ಮಾಣದಲ್ಲೇ. ಇವರಲ್ಲೇ ಒಬ್ಬರಾದ ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಮುಂದಿನ ಸಿನಿಮಾದ ನಾಯಕ-ನಾಯಕಿಯ ಅಧಿಕೃತ ಘೋಷಣೆಯನ್ನು ಇಂದು(ಜುಲೈ 17) ಚಿತ್ರತಂಡ ಮಾಡಿದೆ. ಯೋಗರಾಜ್ ಭಟ್ ಅವರ ನಿರ್ದೇಶನದ ‘ಪಂಚತಂತ್ರ’ ಸಿನಿಮಾ ಖ್ಯಾತಿಯ ಪ್ರತಿಭಾವಂತ ನಟ ವಿಹಾನ್ ಅವರು ನಾಯಕರಾದರೆ, ‘ನಮ್ಮನೆ ಯುವರಾಣಿ’ ಧಾರವಾಹಿ ಮೂಲಕ ಕನ್ನಡಿಗರ ಮನೆಮಗಳಾಗಿರುವ ಅಂಕಿತಾ ಅಮರ್ ಅವರು ನಾಯಕಿಯಾಗಿ ಈ ಮುಂದಿನ ಸಿನಿಮಾದಲ್ಲಿ ನಟಿಸಲಿದ್ದಾರೆ.

‘ಕಿರಿಕ್ ಪಾರ್ಟಿ’, ‘ಅವನೇ ಶ್ರೀಮನ್ನಾರಾಯಣ’ ಮುಂತಾದ ಅದ್ಭುತ ಕಥೆಗಳನ್ನು ಕೆತ್ತಿದ ‘ದಿ ಸೆವೆನ್ ಓಡ್ಸ್’ ತಂಡದ ಸದಸ್ಯರಲ್ಲೊಬ್ಬರಾದ ಚಂದ್ರಜಿತ್ ಬೆಳ್ಳಿಯಪ್ಪ ಅವರ ನಿರ್ದೇಶನದಲ್ಲಿ ಈ ಹೊಸ ಚಿತ್ರ ಮೂಡಿಬರಲಿದ್ದು, ‘ಪರಮ್ ವಾಹ್ ಸ್ಟುಡಿಯೋಸ್’ ನಿರ್ಮಾಣ ಮಾಡಲಿದೆ. ತಮ್ಮೆಲ್ಲ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹೀರೋ-ಹೀರೋಯಿನ್ ಫೋಟೋ ಹಂಚಿಕೊಂಡು ‘ಪರಮ್ ವಾಹ್’ ಕುಟುಂಬಕ್ಕೆ ಸೇರಿಕೊಳ್ಳುತ್ತಿರುವ ಹೊಸ ನಟ-ನಟಿಯನ್ನು ಸ್ವಾಗತಿಸಿದ್ದಾರೆ ಚಿತ್ರತಂಡ.