- July 17, 2022
ನಟ ರಿಷಿ ಅವರ ಹೊಸ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್.


ಚಂದನವನದ ಸಿಂಪಲ್ ಡೈರೆಕ್ಟರ್ ‘ಸಿಂಪಲ್’ ಸುನಿ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದಂತಹ ಹಿಟ್ ಸಿನಿಮಾ ‘ಆಪರೇಷನ್ ಅಲಮೇಲಮ್ಮ’ದಲ್ಲಿನ ತಮ್ಮ ವಿಭಿನ್ನ ಅಭಿನಯದಿಂದ ಕನ್ನಡಿಗರ ಮನದ ಮನೆಮಾತಾದ ನಟ ರಿಷಿ ಅವರು. ನಂತರ ‘ಕವಲುದಾರಿ’, ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸ್ಯಾಂಡಲ್ವುಡ್ ನ ಭರವಸೆಯ ನಟ ಎನಿಸಿಕೊಂಡಿದ್ದರು. ಇದೀಗ ಅವರ ಮುಂದಿನ ಚಿತ್ರದ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ. ಅದು ಕೂಡ ಸೀದಾ ಒಟಿಟಿ ಪರದೆ ಮೇಲೆ.




ರಿಷಿ ನಟಿಸಿರುವ ಮುಂದಿನ ಸಿನಿಮಾ ‘ನೋಡಿ ಸ್ವಾಮಿ ಇವನು ಇರೋದೇ ಹೀಗೆ’ ಸೀದಾ ಒಟಿಟಿಯಲ್ಲಿ ಬಿಡುಗಡೆಯಗುವುದೆಂದು ಚಿತ್ರತಂಡ ಈ ಹಿಂದೆಯೇ ಘೋಷಣೆ ಮಾಡಿತ್ತು.’ಜೀ5′ ಸಂಸ್ಥೆ ಈ ಸಿನಿಮಾದ ಹಕ್ಕುಗಳನ್ನು ಕೂಡ ಪಡೆದಾಗಿತ್ತು. ಈಗ ‘ಜೀ5’ ನಲ್ಲಿ ಸಿನಿಮಾ ಬಿಡುಗಡೆಯಾಗುವ ದಿನಾಂಕವನ್ನ ಚಿತ್ರತಂಡ ತಿಳಿಸಿದೆ. ಇದೇ ಜುಲೈ 22ರಿಂದ ‘ಜೀ5(ZEE 5) ಆಪ್ ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ.




ಇಸ್ಲಾಹುದ್ದಿನ್ ಅವರ ನಿರ್ದೇಶನದ ಈ ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಇದೊಂದು ಹಾಸ್ಯಬರಿತ ಮನರಂಜನಾ ಚಿತ್ರ ಎಂದೂ ಟ್ರೈಲರ್ ಸಾರಿ ಹೇಳುತ್ತಿದೆ. ನಾಯಕ ರಿಷಿ ಅವರ ಜೊತೆಗೆ ಧನ್ಯ ಬಾಲಕೃಷ್ಣ, ಗ್ರೀಷ್ಮ ಶ್ರೀಧರ್, ನಾಗಭೂಷಣ ಮುಂತಾದವರು ಬಣ್ಣ ಹಚ್ಚಿದ್ದಾರೆ. ಇದೇ ಜುಲೈ 22ರಿಂದ ಸಿನಿಮಾ ‘ಜೀ 5’ ಆಪ್ ನಲ್ಲಿ ಸಿನಿಮಾ ನೋಡಲು ಸಿಗಲಿದ್ದು, ಚಿತ್ರ ಎಷ್ಟು ನಗಿಸಲಿದೆ ಎಂದು ಕಾದು ನೋಡಬೇಕಿದೆ.






