- May 23, 2022
“ರಾ ರಾ ರಕ್ಕಮ್ಮ” ಎನ್ನಲಿದ್ದಾರೆ ‘ವಿಕ್ರಾಂತ್ ರೋಣ’


ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಮುಂದಿನ ಚಿತ್ರ ‘ವಿಕ್ರಾಂತ್ ರೋಣ’ ದಿನಕ್ಕೊಂದು ದೊಡ್ಡ ದೊಡ್ಡ ಸುದ್ದಿಗಳಿಂದ ಜನರನ್ನ ಸೆಳೆಯುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಒಂದೊಂದೇ ಹೊಸ ಹೊಸ ಅಪ್ಡೇಟ್ ಗಳ ಮೂಲಕ ಎಲ್ಲೆಡೆ ಸದ್ದು ಮಾಡುತ್ತಿದ್ದಾರೆ. ಇದೀಗ ಚಿತ್ರದಿಂದ ಮೊದಲ ಹಾಡನ್ನು ಬಿಡುಗಡೆಗೊಳಿಸಲು ಹೊರಟಿದ್ದಾರೆ.


ಅನೂಪ್ ಎಸ್ ಭಂಡಾರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ, ನಿರೂಪ್ ಭಂಡಾರಿ, ನೀತ ಅಶೋಕ್, ಮುಂತಾದ ನಟರು ಬಣ್ಣ ಹಚ್ಚಿದ್ದಾರೆ. ಇವರೆಲ್ಲರ ಜೊತೆಗೆ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ‘ರಾಕೆಲ್ ಡಿಕೊಸ್ಟ’ ಅಲಿಯಾಸ್ ‘ಗಡಂಗ್ ರಕ್ಕಮ್ಮ’ ಎಂಬ ಹೆಸರಿಂದ ಜಾಕ್ವೆಲಿನ್ ನಟಿಸಲಿದ್ದು, ಈ ಪಾತ್ರಕ್ಕೆ ಸಂಭಂಧಿಸಿದಂತಹ ‘ರಾ ರಾ ರಕ್ಕಮ್ಮ’ ಎಂಬ ಹಾಡನ್ನು ಬಿಡುಗಡೆಗೊಳಿಸಲು ಚಿತ್ರರಂಗ ಸಜ್ಜಾಗಿದೆ. ಪ್ರಾಯಷಃ ಐಟಂ ಸಾಂಗ್ ರೀತಿಯದ್ದಾಗಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ. ಐದು ಭಾಷೆಗಳಲ್ಲಿ ಐದು ಐದು ಬೇರೆ ಬೇರೆ ದಿನಗಳಲ್ಲಿ ಬಿಡುಗಡೆಯಗುತ್ತಿರುವುದು ವಿಶೇಷ. ಕನ್ನಡದಲ್ಲಿ ಮೇ 23ರ ಮಧ್ಯಾಹ್ನ 3:05ಕ್ಕೆ, ಹಿಂದಿ, ತೆಲುಗು, ತಮಿಳು ಹಾಗು ಮಲಯಾಳಂನಲ್ಲಿ ಕ್ರಮವಾಗಿ 24, 25, 26 ಹಾಗು 27ಕ್ಕೆ ಮಧ್ಯಾಹ್ನ 1:05ಕ್ಕೆ ಸರಿಯಾಗಿ ಬಿಡುಗಡೆಯಾಗಲಿದೆ. ಪ್ರತಿಯೊಂದು ಭಾಷೆಯ ಹಾಡುಗಳು ‘ಟಿ-ಸೀರೀಸ್’ ಹಾಗು ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆಯಾಗಲಿದೆ.


ಕನ್ನಡ ಭಾಷೆಯಲ್ಲಿ ನಿರ್ದೇಶಕ ನಿರೂಪ್ ಭಂಡಾರಿ ಅವರು ಸಾಹಿತ್ಯ ಬರೆದಿದ್ದು, ತಮಿಳಿನಲ್ಲಿ ಪಳನಿ ಭಾರತಿ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತ್ರೀ, ಮಲಯಾಳಂ ನಲ್ಲಿ ಸಂತೋಷ್ ವರ್ಮಾ ಹಾಗು, ಹಿಂದಿಯಲ್ಲಿ ಶಬ್ಬೀರ್ ಅಹ್ಮದ್ ಹಾಡನ್ನ ಬರೆದಿದ್ದಾರೆ. ಕನ್ನಡ, ಹಿಂದಿ ಹಾಗು ತಮಿಳಿನಲ್ಲಿ ನಕಾಶ್ ಅಝೀಜ್ ಹಾಗು ಸುನಿಧಿ ಚೌಹಾಣ್ ದನಿಯಾಗಿದ್ದು, ತೆಲುಗಿನಲ್ಲಿ ನಕಾಶ್ ಅಝೀಜ್ ಜೊತೆಗೆ ಮಂಗಲಿ ಅವರು ಹಾಡಿದ್ದು, ಮಲಯಾಳಂ ಭಾಷೆಯಲ್ಲಿ ಟಿಪ್ಪು ಹಾಗು ಭದ್ರ ರಾಜಿನ್ ಅವರು ಹಾಡಿದ್ದಾರೆ.




ಈಗಾಗಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋ ಈ ಸಿನಿಮಾವನ್ನು, ಹಿಂದಿಯಲ್ಲಿ ‘ಸಲ್ಮಾನ್ ಖಾನ್ ಫಿಲಂಸ್’ ಡಿಸ್ಟ್ರಿಬ್ಯೂಟ್ ಮಾಡಲಿದೆ. ಹಾಗೆಯೇ ಚಿತ್ರದ 3ಡಿ ಅವತಾರಣಿಕೆಯನ್ನು ‘ಪಿವಿಆರ್’ ದೇಶದಾದ್ಯಂತ ವಿತರಣೆ ಮಾಡಲಿದೆ. ಜುಲೈ 28ಕ್ಕೆ ಪ್ರಪಂಚದಾದ್ಯಂತ ಬಿಡುಗಡೆಯಾಗುತ್ತಿರುವ ‘ವಿಕ್ರಾಂತ್ ರೋಣ’ ತನ್ನ ಬಗೆಗಿನ ನಿರೀಕ್ಷೆಯನ್ನ ಮುಗಿಲಿನೆತ್ತರಕ್ಕೆ ಏರಿಸುತ್ತಿದೆ.






