- April 5, 2022
‘ತೂಫಾನ್’ ಎಬ್ಬಿಸಿದ ಬಳಿಕ ಕೆಜಿಎಫ್ ನಿಂದ ಎಮೋಷನಲ್ ಹಾಡು.


ಕೆಜಿಎಫ್ ಚಾಪ್ಟರ್ 2 ಚಿತ್ರದ ಬಗ್ಗೆ ಹೆಚ್ಚೇನು ಮಾಹಿತಿ ನೀಡುವುದು ಬೇಕಾಗಿಲ್ಲ. ಪ್ರತಿಯೊಬ್ಬ ಸಿನಿರಸಿಕನು ಸಹ ಕುತೂಹಲದಲ್ಲೇ ಈ ಸಿನಿಮಾದ ಬಗೆಗಿನ ಸಾಕಷ್ಟು ಮಾಹಿತಿಗಳನ್ನ ಕಲೆಹಾಕಿರುತ್ತಾನೆ. ಇನ್ನೇನು ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಟ್ರೈಲರ್ ಬಿಡುಗಡೆಗೆ ವಿಜೃಂಭಣೆಯ ಕಾರ್ಯಕ್ರಮ ನಡೆಸಿ ಪ್ರಪಂಚದ ಮೂಲೆಮೂಲೆಗೂ ಬಿಸಿ ಮುಟ್ಟಿಸಿದ್ದಾಯ್ತು. ಈಗ ಚಿತ್ರತಂಡ ತಮ್ಮ ಪ್ರಚಾರದ ಕೆಲಸಗಳನ್ನ ಬಿರುಸಿನಿಂದ ನಡೆಸುತ್ತಿದೆ. ಈ ನಡುವೆ ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ಎರಡನೇ ಹಾಡನ್ನು ಚಿತ್ರತಂಡ ಬಿಡುಗಡೆಗೊಳಿಸಲು ನಿರ್ಧರಿಸಿದೆ.


ಕೆಜಿಎಫ್ ಚಿತ್ರತಂಡದಿಂದ ನಾಯಕ ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ರವೀನ ಟಂಡನ್ ಹಾಗು ಸಂಜಯ್ ದತ್ ಸೇರಿದಂತೆ ಮುಂತಾದವರು ಪ್ರಚಾರದ ಓಟದಲ್ಲಿ ಭಾಗಿಯಾಗುತ್ತಿದ್ದಾರೆ. ಚಿತ್ರತಂಡ ದೆಹಲಿಯಲ್ಲಿ ಪ್ರಚಾರ ನಡೆಸಿ ಈಗ ಮುಂಬೈಯಲ್ಲಿ ತಮ್ಮ ಪ್ರಚಾರದಾಟವನ್ನ ಮುಂದುವರೆಸುತ್ತಿದೆ. ಈ ನಡುವೆ ಪ್ರಚಾರದ ಭಾಗವಾಗಿ ಚಿತ್ರತಂಡ ತನ್ನ ಎರಡನೇ ಹಾಡಿನ ಬಿಡುಗಡೆಗೆ ಮುಂದಾಗಿದೆ. ತಾಯಿಯ ಮಮತೆಯ ಮೇಲಿನ ಹಾಡು ಇದಾಗಿರಲಿದ್ದು, ಪಂಚಭಾಷೆಗಳಲ್ಲಿ ನಾಳೆ(ಏಪ್ರಿಲ್ 6) ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಅಭಿಮಾನಿಗಳ ಕಿವಿಗಳನ್ನ ತುಂಬಲಿದೆ.


ಕೆಜಿಎಫ್ ಚಾಪ್ಟರ್ 2 ಸಿನಿಮಾ ಇದೆ ಏಪ್ರಿಲ್ 14ರಂದು ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಹಾಗಾಗಿಯೇ ಸಿನಿಮಾದ ಹಾಡುಗಳು ಕೂಡ ಪಂಚಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ‘ಎಲ್ಲ ಮಾತೆಯರ ನಾದ’ ಎಂಬ ಅರ್ಥವುಳ್ಳ ಈ ಹಾಡು ಕನ್ನಡದಲ್ಲಿ ‘ಗಗನ ನೀ’ ಎಂಬ ಹೆಸರಲ್ಲಿ ಲಭ್ಯವಾದರೆ, ತಮಿಳಿನಲ್ಲಿ ‘ಆಗಿಲಮ್ ನೀ’, ತೆಲುಗಿನಲ್ಲಿ ‘ಯಡಗರ ಯಡಗರ’ ಹಾಗು ಮಲಯಾಳಂನಲ್ಲಿ ‘ಗಗನಂ ನೀ’ ಎಂಬ ಹೆಸರಿನಲ್ಲಿ ‘ಲಹರಿ ಮ್ಯೂಸಿಕ್’ ಹಾಗು ‘ಟಿ-ಸೀರೀಸ್’ ಯೂಟ್ಯೂಬ್ ಚಾನೆಲ್ ಗಳಲ್ಲಿ ಬಿಡುಗಡೆಗೊಳ್ಳಲಿದೆ. ಇನ್ನು ಹಿಂದಿ ಭಾಷೆಯಲ್ಲಿ ‘ಫಲಕ್ ತು, ಗರಜ್ ತು’ ಎಂಬ ಶೀರ್ಷಿಕೆಯಲ್ಲಿ ‘ಎಂ ಆರ್ ಟಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ನಲ್ಲಿ ಕೇಳುಗರಿಗೆ ಕೇಳಸಿಗಲಿದೆ. ಏಪ್ರಿಲ್ 6ರ ಮಧ್ಯಾಹ್ನ ಒಂದು ಗಂಟೆಯಿಂದ ಕೆಜಿಎಫ್ ಸಿನಿಮಾದ ಹೊಸ ಧಾಖಲೆ ಬರೆಯಲು ಹಾಡೊಂದು ಸಿದ್ದವಾಗಿರಲಿದೆ.










