- June 12, 2022
ಸದ್ದು ಮಾಡುತ್ತಿದೆ ಕನ್ನಡದ ಹೊಸ ವೆಬ್ ಸೀರೀಸ್.


ಒಟಿಟಿ ಪರದೆಗಳ ಮೇಲೆ ಕನ್ನಡದ ಸೀರೀಸ್ ಗಳು ಕಡಿಮೆ ಇದೆ ಅನ್ನುವುದು ಝೆಡ್ ಎಲ್ಲ ಕನ್ನಡಿಗನ ಒಂದು ದೂರು. ನಮ್ಮಲ್ಲಿ ಒಟಿಟಿಗೇ ಮಾಡುವಂತ ಸಿನಿಮಾಗಳು ಅಪರೂಪ, ಇನ್ನು ವೆಬ್ ಸೀರೀಸ್ ಗಳನ್ನೂ ಕೇಳುವಂತೆಯೇ ಇಲ್ಲ, ಎಲ್ಲೋ ಬೆರಳೆಣಿಕೆಯಷ್ಟು ಕನ್ನಡದ ಸ್ವಂತ ವೆಬ್ ಸೀರೀಸ್ ಗಳು ಲೆಕ್ಕಕ್ಕೆ ಸಿಗುತ್ತವೆ. ಸದ್ಯ ಕನ್ನಡದಲ್ಲಿ ಒಂದೆರಡು ವೆಬ್ ಸೀರೀಸ್ ಗಳು ಸದ್ದು ಮಾಡುತ್ತಿವೆ. ಅದರಲ್ಲಿ ಇತ್ತೀಚೆಗೆ ಬಿಡುಗಡೆ ಆದಂತಹ ‘ಬೈ ಮಿಸ್ಟೇಕ್’ ಮುಂಚೂಣಿಯಲ್ಲಿದೆ.


ಬೆಂಗಳೂರಿನಲ್ಲಿ ಒಂದೇ ಫ್ಲಾಟ್ ನಲ್ಲಿ ವಾಸವಿರುವ ಇಬ್ಬರೂ ಟೆಕ್ಕಿಗಳಾದ ಭರತ್ ಹಾಗು ಮೈತ್ರಿಯ ಜೀವನದಲ್ಲಿ ಆಗುವ ಕಥೆಯೇ ಈ ‘ಬೈ ಮಿಸ್ಟೇಕ್’. ‘ವೂಟ್ ಸೆಲೆಕ್ಟ್’ ನಲ್ಲಿ ಈ ವೆಬ್ ಸೀರೀಸ್ ಪ್ರದರ್ಶನಗೊಳ್ಳುತ್ತಿದ್ದು, ಎಲ್ಲೆಡೆ ಮೆಚ್ಚುಗೆಯ ಮಾತುಗಳನ್ನ ಪಡೆಯುತ್ತಿದೆ. ‘ಬಡವ ರಾಸ್ಕಲ್’ ಸಿನಿಮಾ ಖ್ಯಾತಿಯ ಪೂರ್ಣ ಮೈಸೂರು ಹಾಗು ‘ಸಕುಟುಂಬ ಸಮೇತ’ ಸಿನಿಮಾ ಖ್ಯಾತಿಯ ಸಿರಿ ರವಿಕುಮಾರ್ ಅವರು ಭರತ್ ಹಾಗು ಮೈತ್ರಿ ಪಾತ್ರದಲ್ಲಿ ನಟಿಸಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ‘ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್’ ಬ್ಯಾನರ್ ಅಡಿಯಲ್ಲಿ ಅವರ ಪುತ್ರಿಯಾದ ನಿವೇದಿತಾ ಶಿವರಾಜಕುಮಾರ್ ಹಾಗು ‘ಸಕತ್ ಸ್ಟುಡಿಯೋ’ ಸೇರಿ ಈ ಸೀರೀಸ್ ಅನ್ನು ನಿರ್ಮಾಣ ಮಾಡಿದ್ದು, ಸದ್ಯ ‘ವೂಟ್ ಸೆಲೆಕ್ಟ್’ನಲ್ಲಿ ನೋಡಲು ಲಭ್ಯವಾಗುತ್ತಿದೆ.




ಈ ಹಿಂದೆ ‘ಶ್ರೀ ಮುತ್ತು ಸಿನಿ ಕ್ರಿಯೇಷನ್ಸ್’ ಹಾಗು ‘ಸಕತ್ ಸ್ಟುಡಿಯೋ’ ಸೇರಿ ‘ಹನಿಮೂನ್’ ಎಂಬ ರೋಮ್ಯಾಂಟಿಕ್ ಕಾಮಿಡಿ ರೀತಿಯ ಸೀರೀಸ್ ಒಂದನ್ನು ತೆರೆಮೇಲೆ ತಂದಿದ್ದರು, ಅದು ಕೂಡ ‘ವೂಟ್ ಸೆಲೆಕ್ಟ್’ ನಲ್ಲಿ ಕನ್ನಡದಲ್ಲೇ ಲಭ್ಯವಾಗಿದೆ. ಸಂಜನಾ ಆನಂದ್ ಹಾಗು ನಾಗಭೂಷಣ ಅವರು ಮುಖ್ಯಪಾತ್ರದಲ್ಲಿ ನಟಿಸಿದ್ದ ಈ ಸೀರೀಸ್ ನೋಡುಗರೆಲ್ಲರಿಗೂ ನಗು ತರಿಸುತ್ತಾ, ಒಂದೊಳ್ಳೆ ಮನರಂಜನೆ ನೀಡಿತ್ತು. ಅದರ ಯಶಸ್ಸಿನ ನಂತರ ಅದೇ ತಂತ್ರಜ್ಞರ ತಂಡ, ಈಗ ಈ ಪ್ರಯತ್ನಕ್ಕೆ ಕೈ ಹಾಕಿದ್ದು, ಜೂನ್ 10ರಿಂದ ‘ಬೈ ಮಿಸ್ಟೇಕ್’ ವೂಟ್ ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಆರ್ ಜೆ ಪ್ರದೀಪ ಅವರ ಕಥೆ ಇದರಲ್ಲಿದ್ದು, ಮನುವೆ ಅನುರಾಮ್ ನಿರ್ದೇಶನ ಮಾಡಿದ್ದಾರೆ.






