• June 25, 2022

ಹೊಸ ಚಿತ್ರದೊಂದಿಗೆ ಒಟಿಟಿಗೆ ಬರಲಿದ್ದಾರೆ ಸತೀಶ್ ನೀನಾಸಂ.

ಹೊಸ ಚಿತ್ರದೊಂದಿಗೆ ಒಟಿಟಿಗೆ ಬರಲಿದ್ದಾರೆ ಸತೀಶ್ ನೀನಾಸಂ.

ಸತೀಶ್ ನೀನಾಸಂ ಸದ್ಯ ಸದ್ದಿಲ್ಲದೆ ಹಲವು ಸಿನಿಮಾಗಳನ್ನು ಮಾಡುತ್ತಿದ್ದಾರೆ. ತಮ್ಮ ವಿಭಿನ್ನ ರೀತಿಯ ನಟನೆಯಿಂದ ಪ್ರೇಕ್ಷಕರು ಅದರಲ್ಲೂ ಗ್ರಾಮೀಣ ಪ್ರೇಕ್ಷಕರ ಮನಸೆಳೆದಿರುವ ಇವರು, ಚಂದನವನದ ಸ್ಟಾರ್ ನಟರಲ್ಲಿ ಒಬ್ಬರಾಗಿದ್ದಾರೆ. ಈಗ ಅವರ ಹೊಸ ಚಿತ್ರವೊಂದು ಒಟಿಟಿ ಕಡೆಗೆ ಹೊರಟಿದೆ. ಅದುವೇ ‘ಡಿಯರ್ ವಿಕ್ರಮ್’. ಸತೀಶ್ ಅವರ ಜೊತೆ ಶ್ರದ್ಧಾ ಶ್ರೀನಾಥ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ತನ್ನ ನೇರ ಒಟಿಟಿ ಓಟದ ದಿನಾಂಕ ನಿಗದಿ ಮಾಡಿದೆ.

ಈ ಹಿಂದೆ ‘ಗೋಧ್ರ’ ಎಂಬ ಹೆಸರಿನಿಂದ ಆರಂಭವಾಗಿದ್ದ ಈ ಸಿನಿಮಾಗೆ ಈಗ ‘ಡಿಯರ್ ವಿಕ್ರಮ್’ ಎಂದು ಹೆಸರಿಡಲಾಗಿದೆ. ಜೂನ್ 22ರಂದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಜೊತೆಜೊತೆಗೆ ಜೂನ್ 30ರಿಂದ ‘ವೂಟ್ ಸೆಲೆಕ್ಟ್’ ನಲ್ಲಿ ಚಿತ್ರ ನೋಡಲು ಸಿಗಲಿದೆ ಎಂದು ಅಧಿಕೃತ ಘೋಷಣೆ ಮಾಡಿದ್ದಾರೆ. ‘ಡಿಯರ್ ವಿಕ್ರಮ್’ ಮೂಲಕ ತಮ್ಮ ಮೊದಲ ಸಿನಿಮಾ ನಿರ್ದೇಶನ ಮಾಡುತ್ತಿರುವ ಕೆ ಎಸ್ ನಂದೀಶ್ ಅವರು ಒಂದೊಳ್ಳೆ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ಸತ್ಯಕ್ಕಾಗಿಯೇ ಹೋರಾಡುವ ಪತ್ರಕರ್ತನ ಪಾತ್ರದಲ್ಲಿ ಸತೀಶ್ ಅವರು ಹಾಗು ಶಿಕ್ಷಣವೇ ಮುಖ್ಯ ಎಂದು ನಂಬಿರುವ ವಿದ್ಯಾವಂತೆಯ ಪಾತ್ರದಲ್ಲಿ ಶ್ರದ್ದಾ ಅವರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಕಥೆಯಲ್ಲಿ ಏನೆಲ್ಲಾ ಎದುರಾಗಲಿದೆ ಎಂದು ಹೇಳುವ ರೋಮ್ಯಾಂಟಿಕ್ ಪೊಲಿಟಿಕಲ್ ಡ್ರಾಮಾ ಪರಿಯ ಕತೆಯೇ ಈ ‘ಡಿಯರ್ ವಿಕ್ರಮ್’. ಇವರಷ್ಟೇ ಅಲ್ಲದೇ ಅಚ್ಯುತ್ ಕುಮಾರ್, ವಸಿಷ್ಟ ಸಿಂಹ, ಸೋನು ಗೌಡ ಮುಂತಾದವರು ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದ್ದು, ಸಿನಿಮಾಗೆ ಜನ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು ಕಾದು ನೋಡಬೇಕಿದೆ.