• June 4, 2022

ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ

ತ್ರಿಶೂಲ್ ಪಾತ್ರಕ್ಕೆ ವಿದಾಯ ಹೇಳಿದ ನಿನಾದ್ ಹರಿತ್ಸ

ಕೆ.ಎಸ್. ರಾಮ್ ಜೀ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕ ತ್ರಿಶೂಲ್ ಆಗಿ ಅಭಿನಯಿಸುತ್ತಿರುವ ನಿನಾದ್ ಹರಿತ್ಸ ಇದೀಗ ಪಾತ್ರದಿಂದ ಹೊರಬಂದಿದ್ದಾರೆ. ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ನಿನಾದ್ ಹರಿತ್ಸ ತ್ರಿಶೂಲ್ ಪಾತ್ರದಿಂದ ಹೊರಬಂದಿರುವುದು ಸೀರಿಯಲ್ ವೀಕ್ಷಕರಿಗೆ ಬೇಸರ ನೀಡಿದೆ.

ಇದ್ದಕ್ಕಿದ್ದಂತೆ ನಿನಾದ್ ಅವರು ತನ್ನ ಪಾತ್ರಕ್ಕೆ ವಿದಾಯ ಹೇಳಿದ್ದು ಕಾರಣ ಎಲ್ಲೂ ಬಹಿರಂಗಗೊಳಿಸಿಲ್ಲ. ಬಾಲಕಲಾವಿದ ಆಗಿ ಕಿರುತೆರೆ ಪಯಣ ಆರಂಭಿಸಿದ ನಿನಾದ್ ಹರಿತ್ಸ ಬಣ್ಣದ ಲೋಕದಲ್ಲಿ ಬದುಕು ರೂಪಿಸಿಕೊಳ್ಳಬೇಕು ಎಂಬ ಕನಸು ಕಂಡ ಹ್ಯಾಂಡ್ ಸಮ್ ಹುಡುಗ.

ಟೈಂ ಪಾಸ್ ತೆನಾಲಿ ಧಾರಾವಾಹಿಯಲ್ಲಿ ಬಾಲಕಲಾವಿದ ಆಗಿ ಕಾಣಿಸಿಕೊಳ್ಳುವ ಮೂಲಕ ನಟನಾ ನಂಟು ಬೆಳೆಸಿಕೊಂಡಿರುವ ನಿನಾದ್ ಮೊದಲ ಬಾರಿ ಬಣ್ಣ ಹಚ್ಚಿದಾಗ ಕೇವಲ ಆರು ವರ್ಷ. ಮುಂದೆ ಒಂದು ಓದಿನ ಸಲುವಾಗಿ ನಟನೆಗೆ ಬ್ರೇಕ್ ಹಾಕಿದ ನಿನಾದ್ ಪದವಿ ಮುಗಿದದ್ದೇ ತಡ ರಂಗಭೂಮಿಯತ್ತ ಮುಖ ಮಾಡಿದರು.

ತಕ್ಷ್ ಥಿಯೇಟರ್ಸ್ ಎಂಬ ರಂಗತಂಡದ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ನಿನಾದ್ ನಾಟಕಗಳಲ್ಲಿ ನಟಿಸಿದರು. ಮುಂದೆ ಬೇರೆ ಬೇರೆ ನಾಟಕ ತಂಡಗಳಲ್ಲಿ ಗುರುತಿಸಿಕೊಂಡ ನಿನಾದ್ ರಂಗಭೂಮಿಯಲ್ಲಿ ಏಳು ವರ್ಷಗಳ ಕಾಲ ಸಕ್ರಿಯರಾಗಿದ್ದರು.

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಮನೆ ಧಾರಾವಾಹಿಯಲ್ಲಿ ನಾಯಕಿಯ ತಮ್ಮನಾಗಿ ನಟಿಸಿ ಸೈ ಎನಿಸಿಕೊಂಡಿರುವ ನಿನಾದ್ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಳಿ ಹೆಂಡ್ತಿ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪ್ರಿಯಕರ ಅಗಸ್ತ್ಯ ಆಗಿ ಅಭಿನಯಿಸಿದರು.

ಪೋಷಕ ಪಾತ್ರಗಳ ಮೂಲಕ ಕಿರುತೆರೆಯಲ್ಲಿ ಮನೆ ಮಾತಾಗಿದ್ದ ನಿನಾದ್ ನಾಗಿಣಿ ಧಾರಾವಾಹಿಯ ತ್ರಿಶೂಲ್ ಆಗಿ ಕಾಣಿಸಿಕೊಳ್ಳುವ ಮೂಲಕ ಮೊದಲ ಬಾರಿಗೆ ನ ರಲ್ಲಿ ನಾಯಕನಾಗಿ ಭಡ್ತಿ ಪಡೆದ ನಿನಾದ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿ ಆದರು.
ಇದೀಗ ಧಾರಾವಾಹಿಯಿಂದ ಹೊರಬಂದಿದ್ದು ಮತ್ತೊಮ್ಮೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರಾ ಎಂದು ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ.