• June 17, 2022

ಆರಂಭವಾಗ್ತಿದೆ ‘ಸಿಂಧೂರ ಲಕ್ಷ್ಮಣ’.

ಆರಂಭವಾಗ್ತಿದೆ ‘ಸಿಂಧೂರ ಲಕ್ಷ್ಮಣ’.

ಕನ್ನಡ ನಾಡಿನಲ್ಲಿ ತಮ್ಮ ಧೈರ್ಯ ಮೆರೆದ ಹಲವಾರು ಯುವ ಸ್ವಾತಂತ್ರ್ಯ ಹೋರಾಟಗಾರರಿದ್ದಾರೆ. ಅದರಲ್ಲಿ ಪ್ರಮುಖರೊಬ್ಬರೆಂದರೆ ಉತ್ತರ ಕರ್ನಾಟಕ ಭಾಗದ ಸಿಂಧೂರ ಲಕ್ಷ್ಮಣ. ಸದ್ಯ ಮಹಾರಾಷ್ಟ್ರದಲ್ಲಿರುವ ಸಂಗ್ಲಿ ಗ್ರಾಮದಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಗೊಂಡು ತಮ್ಮ 22ನೇ ವಯಸ್ಸಿಗೇ ಪ್ರಾಣತೊರೆದವರು. ಇವರ ಬಗ್ಗೆ ಕನ್ನಡದಲ್ಲಿ ಹೊಸ ಸಿನಿಮಾವೊಂದು ಬರುತ್ತಿರುವುದು ಎಲ್ಲರಿಗೂ ತಿಳಿದಿರೋ ವಿಷಯ. ‘ಸಿಂಧೂರ ಲಕ್ಷ್ಮಣ’ ಎಂಬ ಹೆಸರಿನಿಂದಲೇ ಬಹುನಿರೀಕ್ಷಿತವಾಗಿರುವ ಈ ಸಿನಿಮಾ ಸದ್ಯ ತನ್ನ ಕಥೆಯನ್ನು ಒಂದುಗೂಡಿಸಿಕೊಳ್ಳುತ್ತಿದೆ.

‘ರಾಬರ್ಟ್’ ಸಿನಿಮಾಗೆ ಬಂಡವಾಳ ಹೂಡಿದ್ದ ಉಮಾಪತಿ ಶ್ರೀನಿವಾಸ್ ಗೌಡ ಅವರೇ ಈ ಸಿನಿಮಾ ಕೈಗೆತ್ತಿಕೊಂಡಿದ್ದು, ಅವರೇ ನಿರ್ಮಾಣ ಮಾಡಲಿದ್ದಾರೆ. ಈ ಹಿಂದೆ ಪ್ರಶಾಂತ್ ನೀಲ್ ಅವರ ಜೊತೆ ‘ಉಗ್ರಂ’ ಹಾಗು ‘ಕೆಜಿಎಫ್ ಚಾಪ್ಟರ್ 1’ ಸಿನಿಮಾಗಳಲ್ಲಿ ಕೆಲಸ ಮಾಡಿರುವ ಪುನೀತ್ ರುದ್ರನಾಗ್ ಹಾಗು ಅವರ ತಂಡ ಸದ್ಯ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ತೊಡಗಿಕೊಂಡಿದೆ. “ಈ ಸಿನಿಮಾಗೆ ಸರಿಯಾದ ಕಥೆಯನ್ನು ಜೋಡಿಸಿಕೊಳ್ಳುವುದು ನಮ್ಮ ಮೊದಲ ಆದ್ಯತೆ. ಅಪಾರ ಸಂಶೋಧನೆ ಕೇಳುವಂತಹ ಕಥೆಯಿದು. ಕಥೆ ಮುಗಿದ ನಂತರವೇ ಮುಂದಿನ ಹೆಜ್ಜೆಗಳ ಬಗ್ಗೆ ಆಲೋಚನೆ” ಎನ್ನುತ್ತಾರೆ ನಿರ್ಮಾಪಕ ಉಮಾಪತಿ ಅವರು.

ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕರಾಗಿ ನಟಿಸಲಿದ್ದಾರೆ ಎಂಬ ಸುದ್ದಿ ಸಿನಿಮಾದ ಸುದ್ದಿ ಹುಟ್ಟಿಕೊಂಡಾಗಲೇ ಆರಂಭವಾಗಿತ್ತು. ಆದರೆ ಎಲ್ಲೂ ಕೂಡ ಅಧಿಕೃತ ಘೋಷಣೆ ಆಗಿಲ್ಲ. ದಶಕಗಳ ಹಿಂದೆಯೇ ‘ವೀರ ಸಿಂಧೂರ ಲಕ್ಷ್ಮಣ’ ಎಂಬ ಚಿತ್ರ ಕನ್ನಡದಲ್ಲಿ ಬಂದಿತ್ತಾದರೂ, ಆಧುನಿಕ ಸೌಲಭ್ಯಗಳನ್ನು ಬಳಸಿಕೊಂಡು ಈ ಕಥೆಯನ್ನು ಹೇಗೆ ತೋರಿಸುತ್ತಾರೆ ಎಂದು ನೋಡಲು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.