- May 16, 2022
‘ಕಾಣೆಯಾದವರ ಬಗ್ಗೆ ಪ್ರಕಟಣೆ’ಗಾಗಿ ಒಂದಾದ ಮ್ಯಾಜಿಕಲ್ ಜೋಡಿ…


ಕನ್ನಡ ಇಂಡಿಪೆಂಡೆಂಟ್ ಮ್ಯೂಸಿಕ್ ಯಾನೆ ಕನ್ನಡದ ಆಲ್ಬಮ್ ಹಾಡುಗಳ ಸಾಲಿನಲ್ಲಿ ಹೊಸ ಹುರುಪು ತುಂಬಿದ ಮೊದಲಿಗರು ಎಂದರೆ, ಚಂದನ್ ಶೆಟ್ಟಿ ಹಾಗು ಆಲ್ ಓಕೆ ಖ್ಯಾತಿಯ ಅಲೋಕ್ ಆರ್ ಬಾಬು ಎಂದು ಹೇಳಬಹುದು. ಒಂದು ಕಾಲದಲ್ಲಿ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಇವರಿಬ್ಬರು, ತಮ್ಮ ನಡುವಿನ ವೈಮನಸ್ಸುಗಳಿಂದ ತಮ್ಮದೇ ಸ್ವಂತ ದಾರಿಯಲ್ಲಿ ಹೊರಟವರು. ಇಬ್ಬರು ತಮ್ಮದೇ ವಿಶೇಷ ಶೈಲಿಗಳಿಂದ ಬೇರೆ ಬೇರೆ ರೀತಿಯ ಹಾಡುಗಳನ್ನ ಕನ್ನಡಿಗರಿಗೆ ನೀಡಿ ಅಪಾರ ಅಭಿಮಾನಿಗಳನ್ನ ಹೊಂದಿದ್ದಾರೆ. ಇದೀಗ ಹಲವಾರು ವರ್ಷಗಳ ನಂತರ ಇಬ್ಬರು ಒಂದಾಗಿ ಬರುತ್ತಿದ್ದಾರೆ.






‘ದಿಲ್ ವಾಲಾ’, ‘ರಾಂಬೊ 2’, ‘ಕೃಷ್ಣ ರುಕ್ಕು’ ಸಿನಿಮಾಗಳನ್ನ ನಿರ್ದೇಶನ ಮಾಡಿರೋ ಖ್ಯಾತಿಯ ನಿರ್ದೇಶಕರಾದ ಅನಿಲ್ ಕುಮಾರ್ ಅವರ ಮುಂದಿನ ಚಿತ್ರ ‘ಕಾಣೆಯಾದವರ ಬಗ್ಗೆ ಪ್ರಕಟಣೆ’. ಕನ್ನಡ ಚಿತ್ರರಂಗದಲ್ಲಿ ಹಾಸ್ಯಕ್ಕೆ ತಮ್ಮ ಹೆಸರನ್ನೇ ಅಂಟಿಸಿ ಇಟ್ಟಿರುವಂತಹ ರಂಗಾಯಣ ರಘು, ಹಾಗು ತಬಲಾ ನಾಣಿ ಅವರ ಜೊತೆಗೆ, ನಗಿಸಲು ಸೈ, ಅಳಿಸಲು ಸೈ ಎಂಬ ರವಿಶಂಕರ್ ಅವರುಗಳೇ ಈ ಸಿನಿಮಾದ ನಾಯಕರು. ಎಲ್ಲ ಮನೆಗಳಲ್ಲೂ ಸಾಮಾನ್ಯವಾಗಿ ಆಗುವಂತ ಕಥೆಯೊಂದನ್ನು ವಿಶೇಷವಾಗಿ ತನ್ನದೇ ಶೈಲಿಯಲ್ಲಿ ಹೇಳಹೊರಟಿದ್ದಾರಂತೆ ನಿರ್ದೇಶಕರು. ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಚಿಕ್ಕಣ್ಣ, ವಿಶೇಷ ಪಾತ್ರವೊಂದರಲ್ಲಿ ಆಶಿಕಾ ರಂಗನಾಥ್ ಕೂಡ ಕಾಣಿಸಿಕೊಳ್ಳಲಿದ್ದಾರಂತೆ. ಇತ್ತೀಚೆಗೆ ಬಿಡುಗಡೆಯಾದ ಟೀಸರ್ ಒಂದರಿಂದ ಎಲ್ಲರ ಮನಸೆಳೆಯುತ್ತಿದೆ ಚಿತ್ರತಂಡ.






ಸಿನಿಮಾಗೆ ‘ಮ್ಯಾಜಿಕಲ್ ಕಂಪೋಸರ್’ ಅರ್ಜುನ್ ಜನ್ಯ ಅವರು ಸಂಗೀತ ತುಂಬಿದ್ದು, ಅವರ ಸಂಯೋಜನೆಯಲ್ಲಿ, ಕ್ರಾಂತಿ ಕುಮಾರ್ ಅವರ ಸಾಹಿತ್ಯದಲ್ಲಿ ಮೂಡಿಬಂದ ರಾಪ್ ರೀತಿಯ ಹಾಡೊಂದಕ್ಕೆ ಧ್ವನಿ ನೀಡಲು ಕನ್ನಡದ ಇಂಡಿಪೆಂಡೆಂಟ್ ಹಾಡುಗಳ ಸ್ಟಾರ್ ಗಳಾದ ಆಲ್ ಓಕೆ ಹಾಗು ಚಂದನ್ ಶೆಟ್ಟಿಯವರನ್ನ ಒಂದುಗೂಡಿಸಿದೆ ಚಿತ್ರತಂಡ. ನಿನ್ನೆಯಷ್ಟೇ ರೆಕಾರ್ಡಿಂಗ್ ಮುಗಿಸಿರುವ ಚಿತ್ರತಂಡ ಹಾಡಿನ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಸದ್ಯ ಹೊರಹಾಕಿಲ್ಲ. ಆಲ್ ಓಕೆ ಹಾಗು ಚಂದನ್ ಶೆಟ್ಟಿ ಜೊತೆಯಾಗಿ ಹಾಡೊಂದನ್ನ ನೀಡಲಿದ್ದಾರೆ ಎಂಬ ವಿಷಯವೇ ಸಂಗೀತ ಪ್ರೀಯರಿಗೆ ಆನಂದ ನೀಡುವುದು ಖಂಡಿತ.






