- June 10, 2022
ಚಾರ್ಲಿ ಕಂಡ ಹೊಸ ಬೆಳವಣಿಗೆಗಳು!! ಟ್ವಿಟರ್ ಇಮೋಜಿ, ಪೈರಸಿಯ ಹೋರಾಟ!!


ಕಿರಣ್ ರಾಜ್ ನಿರ್ದೇಶನದಲ್ಲಿ ರಕ್ಷಿತ್ ಶೆಟ್ಟಿ ಹಾಗು ‘ಚಾರ್ಲಿ’ ಎಂಬ ನಾಯಿ ಮುಖ್ಯಪಾತ್ರದಲ್ಲಿ ನಟಿಸಿರುವ ‘777 ಚಾರ್ಲಿ’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜೂನ್ 10ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿರೋ ಈ ಸಿನಿಮಾ ಇದೀಗ ಎಲ್ಲ ಭಾಷೆಗಳಲ್ಲೂ ತನ್ನ ಪ್ರಚಾರದ ಕಾರ್ಯಗಳನ್ನು ಭರದಿಂದ ನಿರ್ವಹಿಸುತ್ತಿದೆ. ಈ ನಡುವೆ ‘777 ಚಾರ್ಲಿ’ ಸಿನಿಮಾ ಹಾಗು ಚಾರ್ಲಿ ನಾಯಿ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ.


ಚಿತ್ರತಂಡ ಪ್ರಚಾರದ ಅಂಗವಾಗಿ ಕನ್ನಡದ ಸೆಲೆಬ್ರಿಟಿಗಳಿಗೆ, ಪತ್ರಕರ್ತರಿಗೆ, ಶ್ವಾನಪ್ರೀಯರಿಗೆ ಮುಂತಾದವರಿಗೆ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿತ್ತು. ಸಿನಿಮಾ ಕಂಡ ಪ್ರತಿಯೊಂದು ಪ್ರೇಕ್ಷಕರು ಸಹ ಕಣ್ತುಂಬಿಕೊಂಡು ಹೊರಗೆ ಬಂದಿದ್ದಾರೆ. ನಟ ರಕ್ಷಿತ್ ಶೆಟ್ಟಿ ಹಾಗು ನಿರ್ದೇಶಕ ಕಿರಣ್ ರಾಜ್ ಪತ್ರಕರ್ತರಿಗೆ ವಿಶೇಷ ಮನವಿ ಕೂಡ ಮಾಡಿಕೊಂಡಿದ್ದಾರೆ. ” ಸಿನಿಮಾ ಬಗೆಗಿನ ವಿಮರ್ಶೆ ಬರೆಯುವಾಗ ನೀವು ಕಂಡಂತಹ ಕೆಲವು ಮುಖ್ಯ ಅಂಶಗಳನ್ನು ದಯಮಾಡಿ ಸೇರಿಸಬೇಡಿ. ಈ ಸಿನಿಮಾವನ್ನು ಅನುಭವಿಸಲು ಎಲ್ಲ ಭಾಗಗಳೂ ಬಹುಮುಖ್ಯ” ಎಂದು ಕೋರಿದೆ ಚಿತ್ರತಂಡ. ಭಾಷೆ-ದೇಶದ ಭೇದಭಾವಗಳಿಲ್ಲದೆ ಕನ್ನಡದ ಜೊತೆಗೆ ಬೇರೆಲ್ಲಾ ಭಾಷೆಗಳಲ್ಲೂ, ಭಾರತೀಯರ ಜೊತೆಗೆ ಹೊರದೇಶಗಳಿಂದಲೂ ಸಿನಿಮಾದ ಬಗೆಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ.


• ಟ್ವಿಟ್ಟರ್ ನಲ್ಲಿ ಇಮೋಜಿ ಪಡೆದ ಚಾರ್ಲಿ.
ಈ ನಡುವೆ ‘777 ಚಾರ್ಲಿ’ ಸಿನಿಮಾ ಅಧಿಕೃತವಾಗಿ ಟ್ವಿಟರ್ ನಲ್ಲಿ ತನ್ನ ಇಮೋಜಿ(Emoji)ಯನ್ನು ಪಡೆದುಕೊಂಡಿದೆ. ಸಿನಿಮಾದ ಬಗೆಗಿನ ಹ್ಯಾಶ್ಟ್ಯಾಗ್(HashTag) ಬಳಸುವವರು ಚಾರ್ಲಿ ನಾಯಿಯ ಭಾವಚಿತ್ರವಿರುವ ಇಮೋಜಿಯನ್ನು ಸೇರಿಸಿಕೊಳ್ಳಬಹುದಾಗಿದೆ. ಈ ರೀತಿಯ ಟ್ವಿಟರ್ ಇಮೋಜಿ ಪಡೆದ ಎರಡನೇ ಕನ್ನಡ ಸಿನಿಮಾ ಇದಾಗಿದೆ. ಈ ಹಿಂದೆ ‘ಕೆಜಿಎಫ್ ಚಾಪ್ಟರ್ 2’ ರಾಕಿ ಭಾಯ್ ಯಶ್ ಭಾವಚಿತ್ರದ ಇಮೋಜಿಯನ್ನು ಪಡೆದಿತ್ತು.


• ಪೈರಸಿಯ ವಿರುದ್ಧ ಚಿತ್ರತಂಡದಿಂದ ಕ್ರಮ.
ಭಾರತದಲ್ಲಿ ಬಿಡುಗಡೆಯಗೋ ಸಿನಿಮಾಗಳು ಎದುರಿಸೋ ಅತಿ ದೊಡ್ಡ ಸಮಸ್ಯೆ ಪೈರಸಿ. ಸಿನಿಮಾ ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಚಿತ್ರದ ಸಂಪೂರ್ಣ ಪೈರೆಟೆಡ್ ವಿಡಿಯೋಗಳು ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧ ಇಂಟರ್ನೆಟ್ ಭಾಗಗಳಲ್ಲಿ ಲಭ್ಯವಾಗುತ್ತದೆ. ಹಾಗಾಗಿ ‘777 ಚಾರ್ಲಿ’ ಚಿತ್ರತಂಡ ಚೆನ್ನೈ ಮೂಲದ ‘ಬ್ಲಾಕ್ ಎಕ್ಸ್’ ಸಂಸ್ಥೆಯ ಜೊತೆಗೆ ಕೈಜೋಡಿಸಿದ್ದಾರೆ. ಸಿನಿಮಾದ ಯಾವುದೇ ಪೈರೆಟೆಡ್ ವಿಡಿಯೋಗಳು ಯಾರಿಗೇ ಲಭ್ಯವಾಗಿದ್ದಲ್ಲಿ, ಅದರ ಲಿಂಕ್ ಅನ್ನು ‘ಬ್ಲಾಕ್ ಎಕ್ಸ್ ಟೆಕ್ಸ್(BlockXTechs)’ ಅವರ ಟ್ವಿಟರ್ ಖಾತೆಗೆ ಕಳುಹಿಸಬಹುದು ಅಥವಾ ‘report@blockxtech.com’ ಗೆ ಮೇಲ್ ಕೂಡ ಮಾಡಬಹುದು. ಹಾಗೇನಾದರೂ ಕಂಡುಬಂದಲ್ಲಿ ಈ ಸಂಸ್ಥೆ ಅಂತವರ ಬಗ್ಗೆ ಕಾನೂನು ಅಡಿಯಲ್ಲೇ ಕಠಿಣ ಕ್ರಮ ಕೈಗೊಳ್ಳಲಿದೆ. ಪೈರಸಿ ಮುಕ್ತ ಸಿನಿರಂಗದೆಡೆಗೆ ಇದೊಂದು ದೊಡ್ಡ ಹೆಜ್ಜೆಯಾಗೋ ಸಾಧ್ಯತೆಗಳಿವೆ. ಈ ಹಿಂದೆ ‘ಕೆಜಿಎಫ್ ಚಾಪ್ಟರ್ 2’, ‘RRR’, ‘ವಿಕ್ರಮ್’ ಮೊದಲಾದ ಚಿತ್ರಗಳು ಸಹ ಇದೇ ಕೆಲಸ ಮಾಡಿದ್ದವು.








