• June 22, 2022

ನಮ್ಮನೆ ಯುವರಾಣಿಗೆ ಸಾವಿರ ಸಂಭ್ರಮ.. ಸಂತಸ ಹಂಚಿಕೊಂಡ ರಘು ಗೌಡ

ನಮ್ಮನೆ ಯುವರಾಣಿಗೆ ಸಾವಿರ ಸಂಭ್ರಮ.. ಸಂತಸ ಹಂಚಿಕೊಂಡ ರಘು ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯು ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ಇತ್ತೀಚೆಗೆ ಧಾರಾವಾಹಿ ತಂಡ ಈ ಸಂಭ್ರಮವನ್ನು ಸಂತಸದಿಂದಲೇ ಆಚರಿಸಿದೆ. ಇದರ ಜೊತೆಗೆ ನಮ್ಮನೆ ಯುವರಾಣಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಆಗಿ ಅ
ನಟಿಸುತ್ತಿರುವ ರಘು ಗೌಡ ಈ ಸಂತಸದ ವಿಚಾರವನ್ನು ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ತಮ್ಮ ಎಂಟ್ರೀ ಸೀನ್ ನ ವಿಡಿಯೋ ಹಂಚಿಕೊಂಡಿರುವ ರಘು ಗೌಡ “ನಮ್ಮನೆ ಯುವರಾಣಿ ಧಾರಾವಾಹಿ ಯಶಸ್ವಿ ಸಾವಿರ ಸಂಚಿಕೆ ಪೂರೈಸಿದೆ. ಸಾಕೇತ್ ಪಾತ್ರ ನೀಡಿ, ಇಂದು ಕರುನಾಡಿನಾದ್ಯಂತ ಮನೆ ಮಾತಾಗುವಂತೆ ಮಾಡಿದ ಜೈ ಮಾತಾ ಕಂಬೈನ್ಸ್ ಗೆ, ಜಯಾ ಆಳ್ವಾ ಅವರಿಗೆ ಹಾಗೂ ಕಲರ್ಸ್ ಕನ್ನಡ ವಾಹಿನಿಗೆ ಧನ್ಯವಾದಗಳು. ಇನ್ನು ನಮ್ಮನೆ ಯುವರಾಣಿಯ ಸಹ ಕಲಾವಿದರುಗಳಿಗೂ ಹಾಗೂ ತಂತ್ರಜ್ಞರಿಗೂ ಕೂಡಾ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ‌.

“ಸಾಕೇತ್ ಪಾತ್ರಕ್ಕೆ ಪ್ರೋತ್ಸಾಹ ನೀಡುವ ಅಭಿಮಾನಿಗಳಿಗೆ, ಮನೆಯರವರಿಗೂ ಕೂಡಾ ಎಷ್ಟು ಧನ್ಯವಾದ ಹೇಳಿದರೂ ಕಡಿಮೆಯೇ. ಇನ್ನು ಸದಾ ಕಾಲ ನನ್ನನ್ನು, ಸಾಕೇತ್ ಪಾತ್ರವನ್ನು ಬೆಂಬಲಿಸುವ ಫ್ಯಾನ್ಸ್ ಪೇಜ್ ಗೂ ಧನ್ಯವಾದಗಳು. ನಿಮ್ಮ ಪ್ರೋತ್ಸಾಹ ಸದಾ ಕಾಲ ಹೀಗೆಯೇ ಇರಲಿ” ಎಂದು ಬರೆದುಕೊಂಡಿದ್ದಾರೆ ರಘು ಗೌಡ.

ಪದವಿಯ ಬಳಿಕ ಕಂಪೆನಿಯೊಂದರಲ್ಲಿ ಕೆಲಸ ಪಡೆದುಕೊಂಡಿದ್ದ ರಘು ಗೌಡ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟವರು. ಬಂದ ಅವಕಾಶವನ್ನು ಬೇಡ ಎನ್ನಲು ಮನಸ್ಸಾಗದೇ ನಟನೆಗೆ ಪಾದಾರ್ಪಣೆ ಮಾಡಿದ್ದ ರಘು ಗೌಡ ಇಂದು ವೀಕ್ಷಕರ ಪಾಲಿಗೆ ಪ್ರೀತಿಯ ಸಾಕೇತ್ ರಾಜ್ ಗುರು.

ರವಿ ಗರಣಿ ನಿರ್ದೇಶನದ ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ ಧಾರಾವಾಹಿಯ ರಂಗೇಗೌಡ ಆಗಿ ಕಿರುತೆರೆಗೆ ಪಾದಾರ್ಪಣೆ ಮಾಡಿದ ರಘು ಗೌಡಗೆ ಮೊದಲ ಧಾರಾವಾಹಿಯೇ ಭರ್ಜರಿ ಯಶಸ್ಸು ನೀಡಿತ್ತು. ಮೊದಲ ಧಾರಾವಾಹಿಯಲ್ಲಿಯೇ ನಾಯಕನಾಗಿ ‌ನಟಿಸಿ ವೀಕ್ಷಕರ ಮನ ಸೆಳೆದಿದ್ದ ರಘು ಗೌಡ ಮುಂದೆ ಸ್ಟಾರ್ ಸುವರ್ಣ ವಾಹಿನಿಯ ಜೀವನ ಚೈತ್ರದಲ್ಲೂ ನಾಯಕನಾಗಿ ಮೋಡಿ ಮಾಡಿದರು.

ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಯಾನಿ ಧಾರಾವಾಹಿಯಲ್ಲಿ ನಾಯಕ ಶ್ರೀವತ್ಸನಾಗಿ ನಟಿಸಿದ್ದ ರಘು ಗೌಡ ಒಂದಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ರಘು ಗೌಡ ವೆಬ್ ಸಿರೀಸ್ ನಲ್ಲಿಯೂ ಕಮಾಲ್ ಮಾಡಿದ್ದಾರೆ.