• June 27, 2022

ಪುನೀತ್ ರಾಜ್ ಕುಮಾರ್ ನನಗೆ ಸ್ಫೂರ್ತಿ : ನಾಗಚೈತನ್ಯ

ಪುನೀತ್ ರಾಜ್ ಕುಮಾರ್ ನನಗೆ ಸ್ಫೂರ್ತಿ : ನಾಗಚೈತನ್ಯ

ಟಾಲಿವುಡ್ ಅಂಗಳದ ಜನಪ್ರಿಯ ನಟ ನಾಗಚೈತನ್ಯ ಅವರು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುದೊಡ್ಡ ಫ್ಯಾನ್ ಅಂತೆ. ಅಂದ ಹಾಗೇ ಈ ವಿಚಾರವನ್ನು ಸ್ವತಃ ನಾಗಚೈತನ್ಯ ಅವರೇ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಮಹಾನಗರಿ ಬೆಂಗಳೂರಿಗೆ ಬಂದಿದ್ದ ನಾಗಚೈತನ್ಯ ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. ಮಾತ್ರವಲ್ಲ ಕನ್ನಡ ಸಿನಿಮಾಗಳ ಕುರಿತಾಗಿ ಮೆಚ್ಚುಗೆಯನ್ನು ಕೂಡಾ ವ್ಯಕ್ತಪಡಿಸಿದ್ದಾರೆ.

“ಪುನೀತ್ ರಾಜ್ ಕುಮಾರ್ ಒಬ್ಬ ಅದ್ಭುತ ಡ್ಯಾನ್ಸರ್. ಮೊದಲಿನಿಂದಲೂ ನಾನು ಅವರ ಡ್ಯಾನ್ಸನ್ನು ಮೆಚ್ಚಿಕೊಂಡವನು. ಪುನೀತ್ ಅವರಂತೆ ಡ್ಯಾನ್ಸ್ ಮಾಡಲು ಅವರಿಗೆ ಮಾತ್ರ ಸಾಧ್ಯ. ಬೇರೆ ಯಾರಿಗೂ ಕೂಡಾ ಅದು ಅಸಾಧ್ಯ. ಅವರ ಡ್ಯಾನ್ಸ್ ನನಗೆ ಸ್ಫೂರ್ತಿ” ಎಂದು ಪುನೀತ್ ಅವರನ್ನು ಕೊಂಡಾಡಿದ್ದಾರೆ ನಾಗ ಚೈತನ್ಯ.

ಇನ್ನು ನಾಗಚೈತನ್ಯ ಇತ್ತೀಚೆಗಷ್ಟೇ ಕೆಜಿಎಫ್ 2 ಸಿನಿಮಾ ನೋಡಿದ್ದು ಸಿನಿಮಾ ತುಂಬಾ ಸೊಗಸಾಗಿದೆ ಎಂದು ಕೂಡಾ ಹೇಳಿದ್ದಾರೆ. ಇದರ ಜೊತೆಗೆ ನಾಗಚೈತನ್ಯ ಒಂದಷ್ಟು ಕನ್ನಡ ಸಿನಿಮಾಗಳನ್ನು ನೋಡಿದ್ದು ಅದರಲ್ಲಿ ಲೂಸಿಯಾ ಸಿನಿಮಾ ಅವರಿಗೆ ಬಹಳ ಇಷ್ಟವಂತೆ. ಇನ್ನು ಇದರ ಜೊತೆಗೆ “ನನ್ನ ಹೊಸ ಹೊಸ ಸಿನಿಮಾಗಳು ರಿಲೀಸ್ ಆದದ್ದೇ ತಡ, ಬೆಂಗಳೂರಿನಿಂದ ಬರುವ ರೆಸ್ಪಾನ್ಸ್ ನನಗೆ ಅತೀವ ಸಂತಸ ನೀಡಿದೆ. ಬೆಂಗಳೂರು ಎಂದರೆ ಒಂದು ಶಕ್ತಿ. ಇಲ್ಲಿನ ಜನ ಯಾವಾಗಲೂ ಕೂಡಾ ಆಕ್ಟೀವ್ ಆಗಿರುತ್ತಾರೆ” ಎಂದು ಹೇಳಿದ್ದಾರೆ.