• March 13, 2022

ಅಪ್ಪು ಇನ್ಮೇಲೆ ಡಾ| ಪುನೀತ್ ರಾಜಕುಮಾರ್

ಅಪ್ಪು ಇನ್ಮೇಲೆ ಡಾ| ಪುನೀತ್ ರಾಜಕುಮಾರ್

ಕನ್ನಡದ ಕಣ್ಮಣಿ, ಯುವರತ್ನ ಪುನೀತ್ ರಾಜಕುಮಾರ್ ಕನ್ನಡ ಸಿನಿರಂಗಕ್ಕೆ ನೀಡಿದ ಕೊಡುಗೆ ಅಪಾರ. ಬಾಲನಟನಾಗಿ ಬಣ್ಣ ಹಚ್ಚಿದ ಅಪ್ಪು, ರಾಷ್ಟ್ರಪ್ರಶಸ್ತಿ ಪಡೆದು ಸಾಧನೆ ಮೆರೆದವರು. ‘ಅಪ್ಪು’ ಚಿತ್ರದಿಂದ ಸಂಪೂರ್ಣ ಪ್ರಮಾಣದ ನಾಯಕನಟನಾಗಿ ತೆರೆಮೇಲೆ ಬಂದ ಪುನೀತ್ ಅಪ್ಪುವಾಗಿಯೇ ಜನಮನದಲ್ಲಿ ಉಳಿದು ಹೋದರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 50 ಚಿತ್ರಗಳಲ್ಲಿ ನಟಿಸಿರುವ ಪುನೀತ್ ಇದೀಗ ಡಾ| ಪುನೀತ್ ರಾಜಕುಮಾರ್ ಆಗಲಿದ್ದಾರೆ.

ನಟನೆಯಷ್ಟೇ ಅಲ್ಲದೇ ಇನ್ನು ಹಲವಾರು ರಂಗಗಳಲ್ಲಿ ಅಪ್ಪು ಕನ್ನಡ ಚಿತ್ರರಂಗಕ್ಕೆ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ. ಬಾಲ್ಯದಿಂದಲೇ ಹಾಡುತ್ತಿದ್ದ ಅಪ್ಪು ತಮ್ಮ ಕೊನೆದಿನಗಳವರೆಗೂ ಹಲವಾರು ಹಾಡುಗಳಿಗೆ ಧ್ವನಿಯಾಗಿದ್ದಾರೆ. “ಕಾಣದಂತೆ ಮಾಯವಾದನು” ಎಂದು ಆರಂಭಿಸಿ “ಗಿಚ್ಚ್ ಗಿಲಿ ಗಿಲಿ” ತನಕ ಹಲವಾರು ಬಗೆಬಗೆಯ ಹಾಡುಗಳನ್ನು ಬೇರೆ ಬೇರೆ ಚಿತ್ರಗಳಿಗೆ ಅಪ್ಪು ಹಾಡಿದ್ದಾರೆ. ಅಷ್ಟೇ ಅಲ್ಲದೇ ತಮ್ಮದೇ ಸಂಸ್ಥೆಯಾದ ‘ಪಿ ಆರ್ ಕೆ ಪ್ರೊಡಕ್ಷನ್ಸ್’ ಹೆಸರಿನಲ್ಲಿ ಹಲವಾರು ಅತ್ಯುತ್ತಮ ಕಥೆಗಳನ್ನು ತೆರೆಮೇಲೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಚಲನಚಿತ್ರ ಮಾತ್ರವಲ್ಲದೆ, ಕಿರುಚಿತ್ರಗಳನ್ನು ಒಳಗೊಂಡಿದೆ.

ಇಷ್ಟೆಲ್ಲಾ ಕೊಡುಗೆಗೆ ಕಾರಣರಾದ ಅಪ್ಪುಗೆ ಅವರ ಸಮಾಜ ಸೇವೆ ಹಾಗು ಸಿನಿಸೇವೆಯನ್ನ ಗುರುತಿಸಿ ನಮ್ಮ ರಾಜ್ಯದ ಶ್ರೇಷ್ಠ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ವನ್ನು ನೀಡಿ ಗೌರವಿಸುವುದಾಗಿ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿದ್ದಾರೆ. ಅದಕ್ಕಿಂತ ಮುಂಚಿತವಾಗಿ ಮೈಸೂರು ವಿಶ್ವವಿದ್ಯಾಲಯ ಅಪ್ಪುವನ್ನು ಡಾಕ್ಟರೇಟ್ ಪದವಿ ನೀಡಿ ಪುರಸ್ಕರಿಸಲು ಸಿದ್ದವಾಗಿದೆ. ಇದೇ ಮಾರ್ಚ್ 22ರಂದು ನಡೆಯಲಿರುವ 102ನೇ ಕನ್ವಕೇಶನ್ ಸಮಾರಂಭದಲ್ಲಿ ಅಪ್ಪುವಿನ ಸಮಾಜ ಸೇವೆ ಹಾಗು ಸಿನಿರಂಗಕ್ಕೆ ನೀಡಿರೋ ಕೊಡುಗೆಗಳನ್ನು ನೆನೆದು, ಮರಣೋತ್ತರ ಡಾಕ್ಟರೇಟ್ ಅನ್ನು ಅಪ್ಪುವಿನ ಮಡಿಲಿಗಿಡಲಿದೆ. ವಿಶೇಷವೆಂದರೆ ಡಾ| ರಾಜಕುಮಾರ್ ಅವರಿಗೂ ಸಹ ಇದೇ ಮೈಸೂರು ಯೂನಿವರ್ಸಿಟಿ ಡಾಕ್ಟರೇಟ್ ಪದವಿಯಿಂದ ಗೌರವಿಸಿತ್ತು.

ಅಪ್ಪುವಿಗೆ ಡಾಕ್ಟರೇಟ್ ಲಭಿಸಲಿರುವುದು ಅಭಿಮಾನಿಗಳಲ್ಲಿ ಸಂತಸ ತುಂಬಿದ್ದರೂ, ಈ ದಿನ ಅಪ್ಪು ನಮ್ಮೊಂದಿಗಿರಬೇಕಿತ್ತು ಅನ್ನೋ ದುಃಖ ಎಲ್ಲರನ್ನೂ ಕಾಡುತ್ತಿದೆ.