• June 27, 2022

ಯುವರಾಜನಿಗೆ ನಾಯಕಿಯಾಗಲಿದ್ದಾರ ‘ಮಿಸ್ ವರ್ಡ್’!!

ಯುವರಾಜನಿಗೆ ನಾಯಕಿಯಾಗಲಿದ್ದಾರ ‘ಮಿಸ್ ವರ್ಡ್’!!

‘ಹೊಂಬಾಳೆ ಫಿಲಂಸ್’ ಸಂಸ್ಥೆ ಹಲವು ಬಹುನಿರೀಕ್ಷಿತ ಸಿನಿಮಾಗಳನ್ನು ಕೈಗೆಟ್ಟಿಕೊಂಡಿದೆ. ಭಾರತದಾದ್ಯಂತ ಪ್ರಸಿದ್ದಿ ಪಡೆದಿರೋ ಈ ನಿರ್ಮಾಣ ಸಂಸ್ಥೆ ಈಗಾಗಲೇ ಹಲವು ‘ಕೆಜಿಎಫ್’,’ರಾಜಕುಮಾರ’ ದಂತಹ ಅಧ್ಭುತ ಚಿತ್ರಗಳನ್ನು ಚಂದನವನಕ್ಕೆ ನೀಡಿದೆ. ಇವರ ಮುಂದಿನ ಸಿನಿಮಾಗಳ ಸಾಲಿನಲ್ಲಿ ರಾಜ್ ಕುಟುಂಬದ ಮುಂದಿನ ಕುಡಿ ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜಕುಮಾರ್ ಅವರ ಚೊಚ್ಚಲ ಚಿತ್ರ ಕೂಡ ಸೇರಿರುವುದು ಈಗಾಗಲೇ ಘೋಷಿತವಾಗಿರೋ ವಿಷಯ. ಯುವರಾಜಕುಮಾರ್ ಅವರನ್ನು ಹೊಂಬಾಳೆ ಫಿಲಂಸ್ ತಮ್ಮ ಬ್ಯಾನರ್ ಅಡಿಯಲ್ಲೇ ಲಾಂಚ್ ಮಾಡಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶಕರಾಗಿಯೂ ಫಿಕ್ಸ್ ಆಗಿದ್ದಾರೆ. ಸದ್ಯ ಸಿನಿಮಾದ ನಾಯಕಿಯ ಬಗ್ಗೆ ಸುದ್ದಿಯೊಂದು ಚಂದನವನದಲ್ಲಿ ತೇಲಾಡುತ್ತಿದೆ.

2017ರಲ್ಲೇ ‘ವಿಶ್ವಸುಂದರಿ’ ಎಂಬ ಕಿರೀಟವನ್ನು ಪಡೆದ ಮಾನುಷಿ ಚಿಲರ್ ಅವರ ಬಗೆಗೆ ಈಗ ಸ್ಯಾಂಡಲ್ವುಡ್ ಸುದ್ದಿ ಮಾಡುತ್ತಿರುವುದು. ಜೂನ್ 3ರಂದು ಬಿಡುಗಡೆಯಾದ ಅಕ್ಷಯ್ ಕುಮಾರ್ ಅವರ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾದ ಮೂಲಕ ತಮ್ಮ ನಟನಾ ಪಯಣವನ್ನು ಇವರು ಆರಂಭಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಬಾಲಿವುಡ್ ದಿಗ್ಗಜನಿಗೆ ನಾಯಕಿಯಾಗಿ ನಟಿಸುವ ಮೂಲಕ ಒಂದೊಳ್ಳೆ ಆರಂಭದ ಹಂಬಲದಲ್ಲಿದ್ದರು ಮಾನುಷಿ ಚಿಲರ್. ಆದರೆ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಕೊಂಚ ವಿಫಲವಾಗಿ, ಅಂದುಕೊಂಡಂತಹ ಫಲಿತಾಂಶ ನೀಡಲಿಲ್ಲ. ಇದೀಗ ಇವರು ಸ್ಯಾಂಡಲ್ವುಡ್ ನಲ್ಲಿ ನಟಿಸೋ ಸೂಚನೆಗಳು ಸಿಗುತ್ತಿವೆ.

‘ಹೊಂಬಾಳೆ ಫಿಲಂಸ್’ ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್ ಗಳಲ್ಲಿ ಮಾನುಷಿ ಅವರ ಜೊತೆಗಿನ ಫೋಟೋ ಒಂದನ್ನು ಹಂಚಿಕೊಂಡಿದೆ. ಫೋಟೋದಲ್ಲಿ ಸಂಸ್ಥೆಯ ಸಂಸ್ಥಾಪಕ ವಿಜಯ್ ಕಿರಗಂದೂರ್ ಅವರು ಮಾನುಷಿ ಅವರಿಗೆ ಹೂ ಗುಚ್ಛ ನೀಡಿ ಅಭಿನಂದಿಸುತ್ತಿರುವಂತೆ ಕಾಣುತ್ತಿದೆ. ಬೆಂಗಳೂರಿನ ‘ಹೊಂಬಾಳೆ ಫಿಲಂಸ್’ ಕಚೇರಿಗೆ ಮಾನುಷಿ ಚಿಲರ್ ಆಗಮಿಸಿದ್ದು, ಆ ಸಂಧರ್ಭದಲ್ಲೇ ಈ ಪೋಟೋ ತೆಗೆಯಲಾಗಿದೆ. ಮೂಲಗಳ ಪ್ರಕಾರ ಮಾನುಷಿ ಚಿಲರ್ ಅವರನ್ನು ಯುವರಾಜ್ ಕುಮಾರ್ ಅವರ ಮೊದಲ ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಆಫರ್ ನೀಡಲಾಗಿದೆ ಎನ್ನಲಾಗುತ್ತಿದೆ. ಈ ಬಗೆಗಿನ ಅಧಿಕೃತ ಘೋಷಣೆಗೆ ಕಾದು ನೋಡಬೇಕಿದೆಯಷ್ಟೇ.