• December 13, 2021

21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್

ಬರೋಬ್ಬರಿ 21 ವರ್ಷಗಳ ನಂತರ ಭಾರತಕ್ಕೆ ವಿಶ್ವಸುಂದರಿ ಪಟ್ಟ ದೊರೆತಿದೆ. ಲಾರಾ ದತ್ತ, ಸುಶ್ಮಿತಾ ಸೇನ್ ನಂತರ ಪಂಜಾಬ್ ಮೂಲದ ಹರ್ನಾಜ್ ಕೌರ್ ಸಂಧು ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ.

ಇಸ್ರೇಲ್ ನ ಐಲಾಟ್ ನಲ್ಲಿ ನಡೆದಿದೆ ಮಿಸ್ ಯೂನಿವರ್ಸ್ ಸ್ಪರ್ಧೆ 2021. ಕಳೆದ ಬಾರಿಯ ವಿಜೇತೆ ಮೆಕ್ಸಿಕೋ ದೇಶದ ಮಾಜಿ ವಿಶ್ವ ಸುಂದರಿ ಆಂಡ್ರಿಯಾ ಮೆಜಾ ಅವರು ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಸಂಧು ಅವರಿಗೆ ಕಿರೀಟ ತೊಡಿಸಿದರು.

1994 ರಲ್ಲಿ ಸುಷ್ಮಿತಾ ಸೇನ್ ಹಾಗೂ 2000 ರಲ್ಲಿ ಬಾಲಿವುಟ್ ನಟಿ ಲಾರಾದತ್ತಾ ವಿಶ್ವ ಸುಂದರಿ ಪಟ್ಟ ತಮ್ಮದಾಗಿಸಿಕೊಂಡಿದ್ದರು. ಇದೀಗ ಭಾರತ ಮತ್ತೆ ವಿಶ್ವ ಸುಂದರಿ ಪಟ್ಟ ತನ್ನದಾಗಿಸಿಕೊಂಡಿದೆ.

ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾದ ಸುಂದರಿಯರಿಗೆ ಕ್ರಮವಾಗಿ ಮೊದಲ ಹಾಗೂ ಎರಡನೇ ರನ್ನರ್ ಅಪ್ ಪಟ್ಟ ದೊರೆತಿದೆ.

ಎಲ್ಲಾ ಮೂರು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಇಂದಿನ ಮಹಿಳೆಯರು ಎದುರಿಸುತ್ತಿರುವ ಒತ್ತಡಗಳನ್ನು ಹೇಗೆ ನಿಭಾಯಿಸುವುದು ಎಂಬುದು ನಿಮ್ಮ ಅಭಿಪ್ರಾಯ ಎಂಬ ಪ್ರಶ್ನೆ ಕೇಳಲಾಗಿತ್ತು.

ಈ ಪ್ರಶ್ನೆಗೆ ಭಾರತದ ಸಂಧು ಅವರು ಹೀಗೆ ಹೇಳಿದ್ದಾರೆ. ಒತ್ತಡಕ್ಕೆ ಇಂದಿನ ದಿನಗಳಲ್ಲಿ ಮೂಲ ಕಾರಣ ತಮ್ಮ ಬಗ್ಗೆ ತಮಗೆ ನಂಬಿಕೆ ಇಲ್ಲದಿರುವುದು. ನಮ್ಮ ಬಗ್ಗೆ ನಾವು ಯೋಚಿಸಬೇಕು. ನಮ್ಮ ನಾಯಕರು ನಾವೇ. ನಮಗೆ ನಾವೇ ಧ್ವನಿಯಾಗಬೇಕು. ನಾನು ನನ್ನ ಮೇಲೆ ನಂಬಿಕೆ ಇಟ್ಟಿರುವುದರಿಂದಲೇ ಇಂದು ನಾನು ಇಲ್ಲಿ ನಿಂತಿರುವುದು ಎಂದು ಉತ್ತರಿಸಿದ್ದಾರೆ.

ಸಂಧು ಅವರು ಮೂಲತಃ ಪಂಜಾಬಿನ ಚಂಢಿಗಡದವರು. ತಮ್ಮ ವಿದ್ಯಾಭ್ಯಾಸ ಎಲ್ಲವನ್ನೂ ಅಲ್ಲಿಯೇ ಮುಗಿಸಿದ್ದಾರೆ. ಪ್ರಸ್ತುತ ಅವರು ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ.

ಇವರು ಮಾಡಲ್ ಹಾಗೂ ಇವರಿಗೆ ಈಜು ಮತ್ತು ಪ್ರವಾಸ ಬಲು ಇಷ್ಟ. 2017 ರಿಂದ ಇವರ ಮಾಡೆಲಿಂಗ್ ಪಯಣ ಶುರುವಾಗಿದೆ.

ಹರ್ನಾಜ್ ಕೌರ್ ಸಂಧು ಪ್ರಸ್ತುತ 70ನೇ ವಿಶ್ವಸುಂದರಿ (ಮಿಸ್ ಯೂನಿವರ್ಸ್) ಪಟ್ಟ ಪಡೆದು ಭಾರಕ್ಕೆ ಹೆಮ್ಮೆ ಎನಿಸಿದ್ದಾರೆ.