- June 17, 2022
‘ಮೇಡ್ ಇನ್ ಚೈನಾ’ ಕಥೆ ಹೇಳಲು ಹೊರಟಿರೋ ನಾಗಭೂಷಣ.


ಕೊರೋನ ಎಂಬ ಒಂದು ಕಾಯಿಲೆ ಅದೆಷ್ಟೋ ಜನರ ಬದುಕು ಬದಲಿಸಿತ್ತು. ಅದರಲ್ಲೂ ಸಿನಿಮಾರಂಗಕ್ಕೆ ದೊಡ್ಡ ಹೊಡೆತಗಳನ್ನೇ ನೀಡಿತ್ತು. ಈ ಸಂಧರ್ಭದಲ್ಲಿ ಬಹುವಾಗಿ ಬಳಕೆಯಾದದ್ದು ಆನ್ಲೈನ್ ಸೇವೆಗಳು. ದೂರದೂರ ಇದ್ದವರು ವಿಡಿಯೋ ಕಾಲ್ ಗಳೂ ಆನ್ಲೈನ್ ಮೀಟಿಂಗ್ ಗಳ ಮೂಲಕ ವೈಯಕ್ತಿಕ ಹಾಗು ವ್ಯವಹಾರಿಕ ಕೆಲಸಗಳನ್ನು ಮಾಡಿಕೊಳ್ಳುತ್ತಿದ್ದರು. ಸದ್ಯ ಇದೇ ಹಿನ್ನೆಲೆಯನ್ನು ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಒಂದು ಬರುತ್ತಿದೆ. ಅದುವೇ ‘ಬಡವ ರಾಸ್ಕಲ್’ ಸಿನಿಮಾ ಖ್ಯಾತಿಯ ನಾಗಭೂಷಣ ನಟನೆಯ ‘ಮೇಡ್ ಇನ್ ಚೈನಾ’.




ಈ ಹಿಂದೆ ಇನ್ನೊಂದು ಕೊರೋನ ಸಂಭಂದಿತ ಸಿನಿಮಾವಾದ ‘ಇಕ್ಕಟ್’ ನಲ್ಲಿ ಸಹ ನಾಯಕರಾಗಿ ನಟಿಸಿದ್ದರು ನಾಗಭೂಷಣ. ಈ ಸಿನಿಮಾದಲ್ಲೂ ಕೂಡ ಅದೇ ರೀತಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಚೈನಾದಲ್ಲಿರುವ ಕನ್ನಡಿಗನಾಗಿ, ತನ್ನ ಗರ್ಭಿಣಿ ಹೆಂಡತಿಯನ್ನು ವಿಡಿಯೋ ಕಾಲ್ ಗಳಿಂದಲೇ ಭೇಟಿಯಾಗುತ್ತಲಿರುವ ಗಂಡನಾಗಿ ನಾಗಭೂಷಣ್ ಅವರು ನಟಿಸಿದ್ದರೆ, ಗರ್ಭಿಣಿ ಪತ್ನಿಯಾಗಿ ‘ಬಿಗ್ ಬಾಸ್’ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ ಅವರು ನಟಿಸಿದ್ದಾರೆ. ಇದೊಂದು ಬಹುಪಾಲು ಡಿಜಿಟಲ್ ರೀತಿಯಲ್ಲೇ ಇರುವ ಸಿನಿಮಾವಾಗಿರಲಿದ್ದು, ಕನ್ನಡದ ಮೊದಲ ‘ವರ್ಚುವಲ್ ಸಿನಿಮಾ’ ಆಗಿರಲಿದೆ. ಒಟಿಟಿ ಗೆಂದು ಬರೆಯಲು ಪ್ರಾರಂಭಿಸಿದ ಕಥೆಯನ್ನು ಬೆಳ್ಳಿಪರದೆಗೆ ತರುತ್ತಿರುವ ಚಿತ್ರತಂಡ ಇದೇ ಜೂನ್ 17ಕ್ಕೆ ಚಿತ್ರವನ್ನ ತೆರೆಕಾಣಿಸುತ್ತಿದೆ.




ಈ ಹಿಂದೆ ‘ಅಯೋಗ್ಯ’ ಹಾಗು ‘ರತ್ನ ಮಂಜರಿ’ ಸಿನಿಮಾಗಳಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಪ್ರೀತಮ್ ತೆಗ್ಗಿನಮನೆ ಅವರೇ ಈ ಸಿನಿಮಾದ ಮೂಲಕ ತಮ್ಮ ಮೊದಲ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಈ ಬಗ್ಗೆ ಮಾತನಾಡುವ ಅವರು, “ನನ್ನ ಮೊದಲ ಸಿನಿಮಾದಲ್ಲಿ ಏನಾದರೂ ವಿಶೇಷವಾಗಿ ಮಾಡಬೇಕೆಂದು ಅಂದುಕೊಂಡಿದ್ದೆ. ಇಂಗ್ಲೀಷ್ ನ ‘ಸರ್ಚಿಂಗ್’, ಹಾಗು ಮಲಯಾಳಂ ನ ‘ಸಿ ಯು ಸೂನ್’ ಸಿನಿಮಾಗಳಿಂದ ಪ್ರೆರೇಪಿತಾನಾಗಿ ಈ ಕಥೆ ಬರೆದಿದ್ದೇನೆ. ಒಟಿಟಿ ಗೆಂದೇ ಬರೆದ ಈ ಸಿನಿಮಾವನ್ನು ಥೀಯೇಟರ್ ನಲ್ಲಿ ಬಿಡುಗಡೆ ಮಾಡಬೇಕೆಂಬುದು ನಮ್ಮ ನಿರ್ಮಾಪಕರ ನಿರ್ಧಾರ. ‘ಮೇಡ್ ಇನ್ ಚೈನಾ’ ಎಂಬ ಹೆಸರು ತುಂಬಾ ಆಕರ್ಷಣೀಯವಾಗಿದ್ದರಿಂದ ಈ ಹೆಸರನ್ನು ಆಯ್ಕೆ ಮಾಡಲಾಗಿದೆ ” ಎನ್ನುತ್ತಾರೆ. ಸಿನಿಮಾವನ್ನು ನಂದಕಿಶೋರ್ ಸಿ ಹಾಗು ‘ಕ್ರಿಸ್ಟಲ್ ಪಾರ್ಕ್ ಸಿನಿಮಾಸ್’ ನಿರ್ಮಾಣ ಮಾಡುತ್ತಿದ್ದಾರೆ.






