• June 16, 2022

ಪ್ರಮೋದ್ ಗೆ ಜೋಡಿಯಾಗಲಿದ್ದಾರೆ ‘ಲವ್ ಮೊಕ್ಟೇಲ್ 2’ ಬೆಡಗಿ

ಪ್ರಮೋದ್ ಗೆ ಜೋಡಿಯಾಗಲಿದ್ದಾರೆ ‘ಲವ್ ಮೊಕ್ಟೇಲ್ 2’ ಬೆಡಗಿ

‘ಪ್ರೀಮಿಯರ್ ಪದ್ಮಿನಿ’ ಹಾಗು ‘ರತ್ನನ್ ಪ್ರಪಂಚ’ ಸಿನಿಮಾಗಳಲ್ಲಿನ ತಮ್ಮ ಅಭಿನಯದಿಂದ ಕನ್ನಡ ಸಿನಿರಸಿಕರ ಮನದಲ್ಲಿ ಖಾಯಂ ಜಾಗ ಮಾಡಿಕೊಂಡಿರುವ ನಟ ಪ್ರಮೋದ್. ಸದ್ಯ ಹಲವಾರು ಸಿನಿಮಾಗಳನ್ನು ಒಪ್ಪಿಕೊಂಡಿರುವ ಇವರು 2017ರ ‘ರಾಜರು’ ಸಿನಿಮಾ ಖ್ಯಾತಿಯ ಗಿರೀಶ್ ಮೂಲಿಮನಿ ಅವರ ಹೊಸ ಸಿನಿಮಾವೊಂದರ ಎರಡು ನಾಯಕರಲ್ಲಿ ಒಬ್ಬರಾಗಿ ನಟಿಸುತ್ತಿದ್ದಾರೆ. ಇವರ ಪಾತ್ರಕ್ಕೆ ನಾಯಕಿ ಯಾರೆಂದು ಚಿತ್ರರಂಗ ಬಹಿರಂಗಪಡಿಸಿದ್ದು, ‘ಲವ್ ಮೊಕ್ಟೇಲ್ 2’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ, ಮಲಯಾಳಂ ಬೆಡಗಿ ರಾಚೆಲ್ ಡೇವಿಡ್ ಈ ಪಾತ್ರಕ್ಕೆ ಜೀವ ತುಂಬಲಿದ್ದಾರೆ.

ಇನ್ನು ಹೆಸರಿಡದ ಈ ಸಿನಿಮಾ ಒಂದು ಟ್ರಾವೆಲ್ ಕಥೆಯಾಗಿರಲಿದೆಯಂತೆ. ಎರಡು ಬೇರೆ ಬೇರೆ ಕಥೆಗಳು ಒಂದೇ ನೇರವಾಗಿ ಓಡೋ ಈ ಚಿತ್ರದಲ್ಲಿ ಪೃಥ್ವಿ ಅಂಬರ್ ಅವರು ಕೂಡ ಒಬ್ಬ ನಾಯಕನಾಗಿ ಬಣ್ಣ ಹಚ್ಚುತ್ತಿದ್ದಾರೆ. ಸಿನಿಮಾ ಹಾಗು ಸಿನಿಮಾದ ಶೀರ್ಷಿಕೆ ಅಧಿಕೃತವಾಗಿ ಇದೇ ಜೂನ್ 23ರಂದು ಘೋಷಿತವಾಗಲಿದ್ದು, ಜುಲೈ ಒಂದರಿಂದ ಚಿತ್ರತಂಡ ಚಿತ್ರೀಕರಣ ಆರಂಭಿಸೋ ಭರದಲ್ಲಿದೆ. ಸದ್ಯ ತಮ್ಮ ಮಲಯಾಳಂ ಸಿನಿಮಾದಲ್ಲಿ ಬ್ಯುಸಿ ಆಗಿರುವ ರಾಚೆಲ್ ಡೇವಿಡ್ ಆದಷ್ಟು ಬೇಗ ತಂಡವನ್ನು ಸೇರಿಕೊಳ್ಳಲಿದ್ದಾರೆ.