• June 6, 2022

‘ಹೊಂಬಾಳೆ’ಯ ಬಹುನಿರೀಕ್ಷಿತ ಮುಂದಿನ ಸಿನಿಮಾಗಳು..

‘ಹೊಂಬಾಳೆ’ಯ ಬಹುನಿರೀಕ್ಷಿತ ಮುಂದಿನ ಸಿನಿಮಾಗಳು..

‘ಹೊಂಬಾಳೆ ಫಿಲಂಸ್’ ಸದ್ಯ ಭಾರತದ ಅತಿದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆ ಎಂದು ಗುರುತಿಸಿಕೊಂಡಿದೆ. ‘ಕೆಜಿಎಫ್’ ಚಿತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಇದೀಗ ಸಾಲು ಸಾಲು ಚಿತ್ರಗಳನ್ನು ನಿರ್ಮಾಣ ಮಾಡುವ ಭರದಲ್ಲಿದೆ. ಅಪ್ಪಟ ಕನ್ನಡ ಸಿನಿಮಾಗಳಿಂದ ಹಿಡಿದು, ಪಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿರೋ ಚಿತ್ರಗಳವರೆಗೆ ಎಲ್ಲವೂ ಇವರ ಕೈಗಳಲ್ಲಿವೆ.

• ‘ಸಲಾರ್’
ಸದ್ಯ ‘ಹೊಂಬಾಳೆ ಫಿಲಂಸ್’ ತಂಡ ಬಹುನಿರೀಕ್ಷಿತ ‘ಸಲಾರ್’ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.ತೆಲುಗಿನ ಪಾನ್ ಇಂಡಿಯನ್ ಸ್ಟಾರ್ ಪ್ರಭಾಸ್ ಅವರನ್ನು ನಾಯಕನಟರಾಗಿ ಹೊಂದಿರುವ ಈ ಸಿನಿಮಾ ತಮ್ಮ ಎರಡನೇ ಸುತ್ತಿನ ಚಿತ್ರೀಕರಣವನ್ನು ಆರಂಭಗೊಳಿಸಲು ಸಿದ್ಧತೆ ನಡೆಸುತ್ತಿದೆ. ಪ್ರಶಾಂತ್ ನೀಲ್ ಅವರ ನಿರ್ದೇಶನದಲ್ಲಿ ಪ್ರಭಾಸ್ ಅವರ ಜೊತೆ ಶೃತಿ ಹಾಸನ್, ಜಗಪತಿ ಬಾಬು, ಮಲಯಾಳಂ ನ ಪೃಥ್ವಿರಾಜ್ ಸುಕುಮಾರನ್ ಮುಂತಾದವರು ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಚಿತ್ರದ ಬಗೆಗಿನ ಸದ್ಯ ಯಾವುದೇ ಹೊಸ ವಿಷಯಗಳನ್ನು ಹೊರಹಾಕದಿರುವ ಚಿತ್ರತಂಡ, ಈ ವರ್ಷಾಂತ್ಯದಲ್ಲಿ ಸಿನಿಮಾ ಬಿಡುಗಡೆಗೋಳಿಸೋ ಸಿದ್ಧತೆಯಲ್ಲಿದೆ.

• ‘ಕಾಂತಾರ’
ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಕರಾವಳಿಯ ದಂತಕತೆ ‘ಕಾಂತಾರ’. ಸಿನಿಮಾದ ರಚನೆ-ನಟನೆ ಹಾಗು ನಿರ್ದೇಶನ ಮೂರೂ ಬಗೆಯ ಜವಾಬ್ದಾರಿಯನ್ನು ಹೊತ್ತಿರುವ ರಿಷಬ್ ಶೆಟ್ಟಿಯವರಿಗೆ ‘ಹೊಂಬಾಳೆ ಫಿಲಂಸ್’ ಸಾಥ್ ನೀಡಿದೆ. ವಿಜಯ್ ಕಿರಗಂದೂರ್ ಅವರ ನಿರ್ಮಾಣದಲ್ಲಿ, ರಿಷಬ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿ, ಅಚ್ಯುತ್ ಕುಮಾರ್, ಸಪ್ತಮಿ ಗೌಡ ಮುಂತಾದವರು ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಸಿನಿಮಾ ಇದೇ ಸೆಪ್ಟೆಂಬರ್ 30ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಕರಾವಳಿಯ ಸಂಪ್ರದಾಯಗಳ ಬಗೆಗಿನ ‘ಕಾಂತಾರ’ ದಸರಾ ಹಬ್ಬಕ್ಕೆ ಕನ್ನಡಿಗರನ್ನು ರಂಜಿಸಲು ಬರಲಿದೆ.

• ‘ರಾಘವೇಂದ್ರ ಸ್ಟೋರ್ಸ್’
‘ಮಿಸ್ಟರ್ ಅಂಡ್ ಮಿಸ್ ರಾಮಾಚಾರಿ’, ‘ರಾಜಕುಮಾರ’ ಚಿತ್ರಗಳಿಂದ ಕನ್ನಡಿಗರ ಮನಸೆಳೆದಿರುವ ನಿರ್ದೇಶಕರು ಸಂತೋಷ್ ಆನಂದ್ ರಾಮ್. ಈಗಾಗಲೇ ‘ಹೊಂಬಾಳೆ ಫಿಲಂಸ್’ ಜೊತೆಗೆ ಎರಡು ಚಿತ್ರಗಳನ್ನು ಮಾಡಿರುವ ಇವರು ತಮ್ಮ ನಾಲ್ಕನೇ ಚಿತ್ರವಾದ ‘ರಾಘವೇಂದ್ರ ಸ್ಟೋರ್ಸ್’ ಗೆ ಮತ್ತೆ ಹೊಂಬಾಳೆ ಸಂಸ್ಥೆಯೊಂದಿಗೆ ಸೇರಿದ್ದಾರೆ. ನವರಸ ನಾಯಕ ಜಗ್ಗೇಶ್ ಅವರು ನಾಯಕರಾಗಿ ನಟಿಸುತ್ತಿರುವ ಈ ಸಿನಿಮಾದಲ್ಲಿ ಜಗ್ಗಣ್ಣನ ತರಲೆಗಳ ಜೊತೆಗೆ ಸಂತೋಷ್ ಆನಂದ್ ರಾಮ್ ಅವರ ಕಥೆ ಸೇರಿ ಒಂದೊಳ್ಳೆ ಹಾಸ್ಯಭರಿತ ಕೌಟುಂಬಿಕ ಚಿತ್ರ ಸಿದ್ಧವಾಗಿದೆ. ಇದೇ ಆಗಸ್ಟ್ 5ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರಮಂದಿರಗಳಲ್ಲಿ ಮನರಂಜನೆಯನ್ನು ಉಣಬಡಿಸಲಿದೆ ‘ರಾಘವೇಂದ್ರ ಸ್ಟೋರ್ಸ್’.

• ‘ಬಘೀರಾ’
ರೋರಿಂಗ್ ಸ್ಟಾರ್ ಶ್ರೀಮುರುಳಿ ಅವರ ಬಹುನಿರೀಕ್ಷಿತ ಮುಂದಿನ ಚಿತ್ರ ‘ಬಘೀರಾ’. ಈ ನಿರೀಕ್ಷೆಯ ಇನ್ನೊಂದು ಕಾರಣ ಪ್ರಶಾಂತ್ ನೀಲ್. ‘ಬಘೀರಾ’ ಚಿತ್ರದ ಕಥೆ ಹಾಗು ಚಿತ್ರಕಥೆಯನ್ನು ಬರೆದವರು ಇವರೇ. ‘ಲಕ್ಕಿ’ ಸಿನಿಮಾ ಖ್ಯಾತಿಯ ಡಾ| ಸೂರಿ ಅವರ ನಿರ್ದೇಶನ ಚಿತ್ರದಲ್ಲಿರಲಿದೆ. ಮೇ 20ರಂದು ಸಿನಿಮಾದ ಮುಹೂರ್ತ ನೆರವೇರಿಸಿಕೊಂಡು, ಜೂನ್ 4ರಿಂದ ಚಿತ್ರದ ಚಿತ್ರೀಕರಣವನ್ನು ಆರಂಭಿಸಿಕೊಂಡಿದೆ ಚಿತ್ರತಂಡ. ಸದ್ಯ ಚಿತ್ರೀಕರಣದಲ್ಲಿ ಭರದಿಂದ ತೊಡಗಿಕೊಂಡಿರುವ ಚಿತ್ರತಂಡ ಯಾವಾಗ ಬಿಡುಗಡೆಯ ಬಗೆಗಿನ ಮಾಹಿತಿ ನೀಡುತ್ತಾರೆ ಎಂದು ಶ್ರೀಮುರಳಿ ಅಭಿಮಾನಿಗಳು ಕಾಯುತ್ತಿದ್ದಾರೆ.

• ‘ದ್ವಿತ್ವ’
ಅಂದುಕೊಂಡಂತೆ ಎಲ್ಲವೂ ಆಗಿದ್ದರೆ, ಪ್ರಾಯಷಃ ಈ ಸಿನಿಮಾದ ಚಿತ್ರೀಕರಣ ಇಷ್ಟೊತ್ತಿಗೆ ಅರ್ಧ ಮುಗಿದಿರುತ್ತಿತ್ತು. ‘ಲೂಸಿಯ’ ಹಾಗು ‘ಯು ಟರ್ನ್’ ಎಂಬ ಎರಡೇ ಚಿತ್ರಗಳಿಂದ ಕನ್ನಡಿಗರ ನಡುವೆ ತಮಗೆ ಒಂದು ಅಭಿಮಾನಿ ಬಳಗವನ್ನೇ ಪಡೆದುಕೊಂಡ ನಿರ್ದೇಶಕ ಪವನ್ ಕುಮಾರ್ ಅವರು. ಕನ್ನಡದ ಯುವರತ್ನ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೊಂದಿಗೆ ಪವನ್ ಕುಮಾರ್ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೇ ಹಲವು ಸಂಚಾಲನಗಳನ್ನು ಹುಟ್ಟುಹಾಕಿತ್ತು. ಹೊಂಬಾಳೆ ಸಂಸ್ಥೆ ‘ದ್ವಿತ್ವ’ ಎಂಬ ಹೆಸರಿನಿಂದ ಈ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿ, ಚಿತ್ರದ ಟೈಟಲ್ ಪೋಸ್ಟರ್ ಅನ್ನು ಕೂಡ ಬಿಡುಗಡೆಗೊಳಿಸಿತ್ತು. ಆದರೆ ಅಪ್ಪು ಅವರ ಅಕಾಲಿಕ ಅಗಲಿಕೆಯಿಂದ ಈ ಎಲ್ಲ ಕನಸುಗಳು ಆರಂಭಕ್ಕೂ ಮುನ್ನವೇ ಅಂತ್ಯಕಾಣುವಂತಾಯಿತು. ಈ ಸಿನಿಮಾ ಬರಲಿದೆಯಾ, ಬಂದರೂ ನಾಯಕ ಯಾರು ಎಂಬ ಯಾವ ಪ್ರಶ್ನೆಗಳಿಗೂ ಇಲ್ಲಿಯವರೆಗೆ ಉತ್ತರ ಸಿಕ್ಕಿಲ್ಲ.

ಇವುಗಳ ಜೊತೆಗೆ ‘ಹೊಂಬಾಳೆ ಫಿಲಂಸ್’ ರಾಜ್ ಕುಟುಂಬದ ಯುವ ಕುಡಿ ‘ಯುವ ರಾಜಕುಮಾರ್’ ಅವರ ಮೊದಲ ಸಿನಿಮಾವನ್ನು ನಿರ್ಮಾಣ ಮಾಡುವುದಾಗಿ ಘೋಷಿಸಿದೆ. ಈ ಸಿನಿಮಾಗೆ ಸಂತೋಷ್ ಆನಂದ್ ರಾಮ್ ಅವರ ನಿರ್ದೇಶನವಿರಲಿದೆ. ಇದಲ್ಲದೆ ‘ಕೆಜಿಎಫ್ ಚಾಪ್ಟರ್ 3’ ಅನ್ನು ಕೂಡ ಹೊಂಬಾಳೆ ತರಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.ಸದ್ಯ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳನ್ನೆಲ್ಲ ಧ್ವಂಸ ಮಾಡುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಚಿತ್ರ ಇದೀಗ ಅಮೆಜಾನ್ ಪ್ರೈಮ್ ವಿಡಿಯೋ ದಲ್ಲಿ ನೋಡಲು ಸಿಗಲಿದೆ.

ಈ ಎಲ್ಲ ಮುಂದಿನ ಚಿತ್ರಗಳು ಕನ್ನಡ ಚಿತ್ರರಂಗಕ್ಕೆ ಹೊಸ ಹುರುಪು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ‘ಹೊಂಬಾಳೆ ಸಂಸ್ಥೆ’ ಕನ್ನಡ ಚಿತ್ರಗಳು ಮಾತ್ರವಲ್ಲದೆ ಹಲವು ಪಾನ್ ಇಂಡಿಯನ್ ಚಿತ್ರಗಳ ಮೂಲಕ ದೇಶದಾದ್ಯಂತ ಕನ್ನಡಿಗರ ಶಕ್ತಿ ತೋರಿಸಲು ಸಿದ್ದವಾಗುತ್ತಿದೆ.