- July 9, 2022
ಬರಲಿದ್ದಾನೆ ‘ಲಂಕಾಸುರ’ ಅತಿ ಶೀಘ್ರದಲ್ಲಿ


‘ಯಂಗ್ ಟೈಗರ್’ ಎಂದೇ ಖ್ಯಾತರಾಗಿರುವ ವಿನೋದ್ ಪ್ರಭಾಕರ್ ಕನ್ನಡದ ಯುವನಟರಲ್ಲಿ ಒಬ್ಬರು. ಪಕ್ಕ ಮಾಸ್ ಆಕ್ಷನ್ ಹೀರೋ ಆಗಿ ಹೊರಹೊಮ್ಮಿರುವ ಇವರು, ಸಿನಿರಂಗದಲ್ಲಿ ಹೊಸ ಹೆಜ್ಜೆಯನ್ನ ಇಡುತ್ತಿದ್ದಾರೆ. ನಟನೆಯ ಜೊತೆಗೆ ಸಿನಿಮಾ ನಿರ್ಮಾಣದ ಕಡೆಗೂ ಹೆಜ್ಜೆ ಹಾಕುತ್ತಿದ್ದು, ತಮ್ಮದೇ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ. ‘ಟೈಗರ್ ಟಾಕೀಸ್’ ಎಂದು ಈ ಸಂಸ್ಥೆಗೆ ಹೆಸರಿಡಲಾಗಿದ್ದು, ಇದರಡಿಯಲ್ಲಿನ ಮೊದಲ ಸಿನಿಮಾ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. ಅದುವೇ ‘ಲಂಕಾಸುರ’.


‘ಟೈಗರ್ ಟಾಕೀಸ್’ ಬ್ಯಾನರ್ ನಿರ್ಮಿಸುತ್ತಿರುವ ಮೊದಲ ಸಿನಿಮಾಗೆ ವಿನೋದ್ ಪ್ರಭಾಕರ್ ಅವರೇ ನಾಯಕನಟರು. ಇತ್ತೀಚಿಗಷ್ಟೇ ನಡೆದ ‘ಟೈಗರ್ ಟಾಕೀಸ್’ ಲೋಗೋ ಅನಾವರಣ ಕಾರ್ಯಕ್ರಮದಲ್ಲಿ ಈ ಚಿತ್ರದ ಬಗೆಗಿನ ಮಾಹಿತಿ ಹೊರಹಾಕಿದ್ದಾರೆ ವಿನೋದ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಲೋಗೋ ಅನಾವರಣ ಗೊಳಿಸಿದ್ದರು, ಜೊತೆಗೆ ರವಿಚಂದ್ರನ್, ಅಭಿಷೇಕ್ ಅಂಬರೀಶ್ ಮುಂತಾದವರು ಕೂಡ ಉಪಸ್ಥಿತರಿದ್ದರು. ಈ ವೇಳೆ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ ವಿನೋದ್ ಪ್ರಭಾಕರ್.




ಪ್ರಮೋದ್ ಕುಮಾರ್ ಅವರು ಮೊದಲ ಬಾರಿ ನಿರ್ದೇಶನ ಮಾಡುತ್ತಿರೋ ‘ಲಂಕಾಸುರ’ ಪಕ್ಕ ಮಾಸ್ ಎಂಟರ್ಟೈನರ್. ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹಾಗು ಪಾರ್ವತಿ ಅರುಣ್ ಜೋಡಿಯಾಗಿ ನಟಿಸುತ್ತಿದ್ದಾರೆ. ಜೊತೆಗೆ ಲೂಸ್ ಮಾದ ಯೋಗಿ, ದೇವರಾಜ್, ರವಿಶಂಕರ್ ನಂತಹ ದೊಡ್ಡ ಹೆಸರುಗಳು ಚಿತ್ರದ ತಾರಾಗಣದಲ್ಲಿದೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ಇವರು, ಸೆಪ್ಟೆಂಬರ್ ತಿಂಗಳಿನಲ್ಲಿ ಸಿನಿಮಾ ಬಿಡುಗಡೆ ಮಾಡೋ ಹವಣಿಕೆಯಲ್ಲಿದ್ದಾರೆ.








