• May 3, 2022

“ಕೆಜಿಎಫ್ ಭಯ ಹುಟ್ಟಿಸಿತ್ತು”: ಅಮೀರ್ ಖಾನ್.

“ಕೆಜಿಎಫ್ ಭಯ ಹುಟ್ಟಿಸಿತ್ತು”: ಅಮೀರ್ ಖಾನ್.

ಕೆಜಿಎಫ್ ಚಾಪ್ಟರ್ 2 ಇದೀಗ ಸಾವಿರ ಕೋಟಿಗಳ ಒಡೆಯ. ಪ್ರಪಂಚದಾದ್ಯಂತ 1000ಕೋಟಿಗಳ ಗಳಿಕೆ ಕಂಡು, ಮುಂದಿರುವ ಎಲ್ಲ ದಾಖಲೆಗಳನ್ನ ಮುರಿಯಲು ಸಾಗುತ್ತಿದೆ. 1000 ಕೋಟಿ ಕಂಡ ನಾಲ್ಕನೇ ಭಾರತೀಯ ಚಿತ್ರ ಹಾಗು ಮೊದಲನೇ ಕನ್ನಡ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿದೆ ಪ್ರಶಾಂತ್ ನೀಲ್ ಅವರ ಈ ಕಲಾಕುಸುರಿ. ಎಲ್ಲೆಡೆ ಅದ್ಭುತ ಪ್ರತಿಕ್ರಿಯೆಗಳನ್ನ ಪಡೆಯುತ್ತಿರೋ ಚಿತ್ರ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನೂ ಕಾಣುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿ ಬಳಗವು ಸಹ ದೊಡ್ಡದಾಗಿ, ಪ್ರಪಂಚದಾದ್ಯಂತ ವಿಸ್ತರಿಸುತ್ತಿದೆ.

ಈವರೆಗೆ ಹಿಂದಿಯಲ್ಲಿ ಸುಮಾರು 370ಕೋಟಿ ಗಳಿಸಿರುವ ಕೆಜಿಎಫ್ ಚಾಪ್ಟರ್ 2 ಭಾರತೀಯ ಚಿತ್ರರಂಗದ ದಾಖಲೆಗಳಲ್ಲೇಲ್ಲಾ ಅಗ್ರಸ್ಥಾನದಲ್ಲಿರುವ ‘ದಂಗಲ್’ ಬರೆದ ಇತಿಹಾಸವನ್ನು ಮರಳಿ ಬರೆಯಬಹುದು. ಪ್ರಪಂಚದಾದ್ಯಂತ 2000 ಕೋಟಿ ಗಳಿಸಿದ್ದ ‘ದಂಗಲ್’ ಹಿಂದಿಯಲ್ಲಿ ಗಳಿಸಿದ್ದು 387 ಕೋಟಿ ಮಾತ್ರ. ಸಾವಿರ ಕೋಟಿ ಕಲೆಕ್ಷನ್ ಸಾಲಿನಲ್ಲಿ ಮೊದಲ ಮೂರು ಚಿತ್ರಗಳಾದ ‘ದಂಗಲ್’, ‘ಬಾಹುಬಲಿ-2’, ‘RRR’ ನಂತರ ‘ಕೆಜಿಎಫ್ ಚಾಪ್ಟರ್ 2’ ಬಂದು ಕೂತಿದೆ. ಇಷ್ಟೆಲ್ಲಾ ದಾಖಲೆಗಳ ಸರದಾರನಾದ ಕೆಜಿಎಫ್ ಚಾಪ್ಟರ್ 2, ಬಾಲಿವುಡ್ ನಲ್ಲೂ ಭಯ ಹುಟ್ಟಿಸಿದೆಯಂತೆ. ಹೀಗೆಂದು ಹೇಳಿದವರು ಬಾಲಿವುಡ್ ನ ಸ್ಟಾರ್ ನಟ, ಅಮೀರ್ ಖಾನ್.

“ಕೆಜಿಎಫ್ ಚಿತ್ರದ ಅಬ್ಬರ ನೋಡಿ ಹೆದರಿದ್ದೆ. ಚಿತ್ರದ ಕಥೆ ಅದ್ಭುತವಾಗಿದೆ. ಹಾಗಾಗಿ ಮೊದಲ ಭಾಗಕ್ಕಿಂತ ಹೆಚ್ಚೇ ಎರಡನೇ ಭಾಗ ಮೆಚ್ಚುಗೆ ಪಡೆಯುತ್ತಿದೆ” ಎಂದಿದ್ದಾರೆ ಅಮೀರ್ ಖಾನ್. ಇತ್ತೀಚೆಗಿನ ಖಾಸಗಿ ಸಂದರ್ಶನವೊಂದರಲ್ಲಿ ಕೆಜಿಎಫ್ ಬಗೆಗಿನ ಈ ಮಾತುಗಳನ್ನ ಹೇಳಿದ್ದಾರೆ ಅಮೀರ್ ಖಾನ್. ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಛಡ್ಡ’ ಕೆಜಿಎಫ್ ಸಮೀಪವೇ ಬಿಡುಗಡೆಯಗೋ ಸುದ್ದಿಯಿತ್ತು. ಆದರೆ ಚಿತ್ರತಂಡ ಬಿಡುಗಡೆಯನ್ನ ಮುಂದೂಡಿದ್ದರು. ಈಗಾಗಲೇ ಬಾಲಿವುಡ್ ನಲ್ಲಿ ಅಜಯ್ ದೇವಗನ್ ಅವರ ‘ರನ್ ವೇ 34’ ಹಾಗು ಟೈಗರ್ ಶ್ರಫ್ ಅವರ ‘ಹೀರೋಪಂತಿ 2’ ಕೆಜಿಎಫ್ ಚಾಪ್ಟರ್ 2 ಎದುರು ನೆಲಕಚ್ಚಿದ್ದು, ಕೆಜಿಎಫ್ ನ ಅಬ್ಬರ ಬಾಲಿವುಡ್ ಸೇರಿದಂತೆ ಎಲ್ಲೆಡೆ ಭರದಿಂದ ನಡೆಯುತ್ತಿದೆ.