• April 28, 2022

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು…

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಿನ್ನು…

ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನು ಪಾತ್ರದ ಮೂಲಕ ಕನ್ನಡಿಗರ ಮನಗೆದ್ದ ನಟಿ ರಶ್ಮಿ ಪ್ರಭಾಕರ್ ನಿಖಿಲ್ ಭಾರ್ಗವ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಕನ್ವೆನ್ಷನ್ ಸೆಂಟರ್ ನಲ್ಲಿ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ರಶ್ಮಿ ವಿವಾಹವಾಗಿರುವ ನಿಖಿಲ್ ಜಾಹೀರಾತು ಏಜೆನ್ಸಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂರು ವರ್ಷಗಳ ಹಿಂದೆ ರಶ್ಮಿ ನೃತ್ಯ ಪ್ರದರ್ಶನಕ್ಕೆ ಕಾರ್ಯಕ್ರಮಕ್ಕೆ ಹೋದಾಗ ಇಬ್ಬರಿಗೂ ಪರಿಚಯವಾಗಿ ಗೆಳೆತನಕ್ಕೆ ತಿರುಗಿತು. ಲಾಕ್ ಡೌನ್ ಸಂದರ್ಭದಲ್ಲಿ ಇಬ್ಬರು ಸಾಮಾಜಿಕ ಕೆಲಸ ಮಾಡಿದ್ದರು. ನಂತರ ರಶ್ಮಿಗೆ ಪ್ರಪೋಸ್ ಮಾಡಿದ್ದಾರೆ ನಿಖಿಲ್. ಇವರಿಬ್ಬರ ಬಗ್ಗೆ ಮೊದಲೇ ತಿಳಿದಿದ್ದ ಕಾರಣ ಮನೆಯವರು ಸಮ್ಮತಿ ಸೂಚಿಸಿದ್ದಾರೆ.

ನವೆಂಬರ್ ತಿಂಗಳಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಸರಳವಾಗಿ ವಿವಾಹ ಆಗಿದ್ದಾರೆ. ನಟಿಯಾಗಿ ಗಮನ ಸೆಳೆದಿರುವ ರಶ್ಮಿ ಸದ್ಯ ತೆಲುಗಿನಲ್ಲಿ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮಿಳು ತೆಲುಗು ಕಿರುತೆರೆಗಳಲ್ಲಿ ನಟಿಸಿರುವ ರಶ್ಮಿ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇವರ ವಿವಾಹ ಕಾರ್ಯಕ್ರಮದಲ್ಲಿ ಕಿರುತೆರೆ ಕಲಾವಿದರುಗಳು ಭಾಗಿಯಾಗಿದ್ದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.