- June 19, 2022
ಹೊಸ ಚಿತ್ರಕ್ಕಾಗಿ ‘ಡಾಲಿ ಪಿಕ್ಚರ್ಸ್’ ಜೊತೆ ಕೈ ಜೋಡಿಸಿದ ‘ಕೆ ಆರ್ ಜಿ’.


ಕನ್ನಡದಲ್ಲಿ ಹೊಸ ರೀತಿಯ ಸಿನಿಮಾಗಳು ಬರುತ್ತಿರುವುದು ಬಹುಪಾಲು ಹೊಸ ನಿರ್ಮಾಣ ಸಂಸ್ಥೆಗಳಿಂದಲೇ. ಇಂತಹ ಹೊಸ ಸಿನಿಮಾ ಪ್ರೊಡಕ್ಷನ್ ಹೌಸ್ಗಳಲ್ಲಿ ಮುಂಚೂಣಿಯಲ್ಲಿರುವವರಲ್ಲಿ ‘ಡಾಲಿ ಪಿಕ್ಚರ್ಸ್’ ಹಾಗು ‘ಕೆ ಆರ್ ಜಿ ಸ್ಟುಡಿಯೋಸ್’ ಕೂಡ ಸೇರಿಕೊಳ್ಳುತ್ತಾರೆ. ಕನ್ನಡದ ಖ್ಯಾತ ನಟ ಡಾಲಿ ಧನಂಜಯ ಅವರ ಮಾಲೀಕತ್ವದ ‘ಡಾಲಿ ಪಿಕ್ಚರ್ಸ್’ ಸದ್ಯ ಅವರದೇ ನಟನೆಯ ‘ಬಡವ ರಾಸ್ಕಲ್’ ಸಿನಿಮಾದ ಯಶಸ್ಸನ್ನ ಕಂಡಿದೆ. ಹಾಗೆಯೇ ಕಾರ್ತಿಕ್ ಹಾಗು ಯೋಗಿ ಜಿ ರಾಜ್ ನೇತೃತ್ವದ ‘ಕೆ ಆರ್ ಜಿ ಸ್ಟುಡಿಯೋಸ್’ ಧನಂಜಯ ಅವರೇ ನಾಯಕರಾಗಿ ನಟಿಸಿದ ‘ರತ್ನನ್ ಪ್ರಪಂಚ’ ಸಿನಿಮಾದ ಮೂಲಕ ನಿರ್ಮಾಣಕ್ಕಿಳಿದು ಸದ್ಯ ಹಲವು ಸಿನಿಮಾಗಳನ್ನು ಸಾಲಿನಲ್ಲಿ ಇಟ್ಟುಕೊಂಡಿದ್ದಾರೆ. ಈಗ ಈ ಎರಡು ಸಂಸ್ಥೆಗಳು ಕೈ ಜೋಡಿಸುತ್ತಿವೆ.


ಈ ಎರಡೂ ಬ್ಯಾನರ್ ಗಳ ಅಡಿಯಲ್ಲಿ ಕನ್ನಡಕ್ಕೆ ಸಿಕ್ಕದ್ದು ಹೊಸ ತರಹದ ಕಥೆಗಳು, ಹೊಸ ತರಹದ ಸಿನಿಮಾಗಳು. ಈಗ ಇನ್ನೊಂದು ಹೊಸ ಪ್ರಯತ್ನಕ್ಕೆ ಕೈ ಹಾಕುತ್ತಿದ್ದಾರೆ. ‘ಬಡವ ರಾಸ್ಕಲ್’ ಸಿನಿಮಾದಲ್ಲಿ ‘ಗಣಪ’ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಡಾಲಿ ಅವರ ಆಪ್ತ ಪೂರ್ಣ ಮೈಸೂರು ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾ ‘ಆರ್ಕೆಸ್ಟ್ರಾ ಮೈಸೂರು’. ಸುನಿಲ್ ಮೈಸೂರು ಅವರು ನಿರ್ದೇಶಿಸುತ್ತಿರುವ ಈ ಸಿನಿಮಾವನ್ನು ‘ಡಾಲಿ ಪಿಕ್ಚರ್ಸ್’ ಹಾಗು ‘ಕೆ ಆರ್ ಜಿ ಸ್ಟುಡಿಯೋಸ್’ ಒಟ್ಟಾಗಿ ತೆರೆಮೇಲೆ ತರಲು ಸಜ್ಜಾಗಿದ್ದಾರೆ. ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಇಟ್ಟಿದ್ದು, ಇದೇ ಜೂನ್ 19ರ ಬೆಳಿಗ್ಗೆ 10:01ಕ್ಕೆ ಸಿನಿಮಾದ ಟೀಸರ್ ಬಿಡುಗಡೆಯಾಗುತ್ತಿದೆ.


ಹಿಂದೊಮ್ಮೆ ಯೂಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದ ‘ಬಾರಿಸು ಕನ್ನಡ ಡಿಂಡಿಮವ’ ವಿಡಿಯೋ ಸಾಂಗ್ ಮಾಡಿದ ತಂಡವೇ ಈ ಸಿನಿಮಾದ ಹಿಂದೆ ಕೆಲಸ ಮಾಡಿದೆ. ಅಶ್ವಿನ್ ವಿಜಯ್ ಕುಮಾರ್ ಹಾಗು ಹೆಸರಾಂತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಚಿತ್ರದ ನಿರ್ಮಾಣ ಮಾಡಿದ್ದು, ರಘು ದೀಕ್ಷಿತ್ ಅವರೇ ಚಿತ್ರಕ್ಕೆ ಸಂಗೀತ ತುಂಬಿದ್ದಾರೆ. ಈ ಸಿನಿಮಾವನ್ನು ‘ಡಾಲಿ ಪಿಕ್ಚರ್ಸ್’ ಹಾಗು ‘ಕೆ ಆರ್ ಜಿ ಸ್ಟುಡಿಯೋಸ್’ ಕೈ ಜೋಡಿಸಿ ವಿತರಿಸುತ್ತಿರುವುದರಿಂದ ಸಿನಿ ಪ್ರೇಕ್ಷಕರಿಗೆ ಈ ಸಿನಿಮಾ ಮೇಲೆ ನಿರೀಕ್ಷೆ ಹುಟ್ಟುತ್ತಿದೆ. ಚಿತ್ರದ ಟೀಸರ್ ಜೂನ್ 19ರಂದು ‘ರಘು ದೀಕ್ಷಿತ್ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ.














