• June 18, 2022

ತಮ್ಮ ಮೂರನೇ ಸಿನಿಮಾ ಘೋಷಿಸಿದ ‘ಕೆ ಆರ್ ಜಿ ಸ್ಟುಡಿಯೋಸ್’.

ತಮ್ಮ ಮೂರನೇ ಸಿನಿಮಾ ಘೋಷಿಸಿದ ‘ಕೆ ಆರ್ ಜಿ ಸ್ಟುಡಿಯೋಸ್’.

‘ಹೊಂಬಾಳೆ ಫಿಲಂಸ್’ನ ಸಹೋದರನಂತಿರುವ ಸಿನಿಮಾ ನಿರ್ಮಾಣ ಸಂಸ್ಥೆ ‘ಕೆ ಆರ್ ಜಿ ಸ್ಟುಡಿಯೋಸ್’. ಈಗಾಗಲೇ ಹಲವು ಅದ್ಭುತ ಸಿನಿಮಾಗಳನ್ನು ರಾಜ್ಯದಾದ್ಯಂತ ವಿತರಣೆ ಮಾಡಿರುವ ಇವರು, ಇದೀಗ ಸಿನಿಮಾ ನಿರ್ಮಾಣದತ್ತ ಕಣ್ಣು ಹಾಯಿಸಿದ್ದಾರೆ. ಡಾಲಿ ಧನಂಜಯ ನಟನೆಯ ‘ರತ್ನನ್ ಪ್ರಪಂಚ’ ಇವರ ಮೊದಲ ನಿರ್ಮಾಣ. ಈ ಚಿತ್ರದಿಂದ ಅತೀವ ಯಶಸ್ಸನ್ನು ‘ಕೆ ಆರ್ ಜಿ’ ಪಡೆದಿತ್ತು. ತದನಂತರ ಡಾಲಿಯೊಂದಿಗೇ ‘ಹೊಯ್ಸಳ’ ಎಂಬ ಸಿನಿಮಾವನ್ನು ಘೋಷಿಸಿದ್ದರು. ಇದೀಗ ತಮ್ಮ ಮೂರನೇ ಸಿನಿಮಾವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

ಸೀದಾ ಒಟಿಟಿಗೇ ಬಂದಂತಹ ‘ರತ್ನನ್ ಪ್ರಪಂಚ’ ಸಿನಿಮಾ ಪ್ರತಿಯೊಬ್ಬ ಸಿನಿರಸಿಕನ ಮನದ ಕದ ತಟ್ಟಿತ್ತು. ಇದರಲ್ಲಿದ್ದ ಒಂದೊಂದು ವಿಶೇಷವಾದ ಪಾತ್ರಗಳು ಎಲ್ಲರ ಮನಸೆಳೆದಿದ್ದವು. ಅದರಲ್ಲೂ ಉತ್ತರ ಕರ್ನಾಟಕ ಪ್ರದೇಶದಲ್ಲಿ ನಡೆವ ಇದರರ್ಧ ಕಥೆ, ಅಲ್ಲಿನ ಪಾತ್ರಗಳು, ಮುಖ್ಯವಾಗಿ ಪ್ರಮೋದ್ ಅವರ ‘ಉಡಾಳ್ ಬಾಬು ರಾವ್’ ಪಾತ್ರ ಎಲ್ಲರ ಅಚ್ಚುಮೆಚ್ಚು. ಈ ಸಿನಿಮಾದಿಂದ ನಿರ್ದೇಶಕ ‘ರೋಹಿತ್ ಪದಕಿ’ ಅವರಿಗೆ ಅಪಾರ ಮೆಚ್ಚುಗೆ ಮೂಡಿಬಂದಿದ್ದವು. ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಿರ್ದೇಶಕ ಸಿಕ್ಕರು ಎಂದು ಎಲ್ಲರು ಹೇಳುತ್ತಿದ್ದರು. ಉತ್ತರ ಕರ್ನಾಟಕದ ಪಾತ್ರಗಳೆಂದರೆ ಹೀಗಿರಬೇಕು ಎಂದು ಎಲ್ಲರು ಕೂಗಿ ಹೇಳುವಂತೆ ಮಾಡಿದ್ದರು ನಿರ್ದೇಶಕರು. ‘ರತ್ನನ್ ಪ್ರಪಂಚ’ವನ್ನು ತಾವೇ ಸೃಷ್ಟಿಸಿ ತಾವೇ ನಿರ್ದೇಶಸಿದ್ದ ರೋಹಿತ್ ಪದಕಿ ಇದೀಗ ಮತ್ತೊಮ್ಮೆ ‘ಕೆ ಆರ್ ಜಿ ಸ್ಟುಡಿಯೋಸ್’ ಅವರೊಂದಿಗೆ ಕೈ ಜೋಡಿಸಿದ್ದಾರೆ. ಆ ಚಿತ್ರಕ್ಕೆ ‘ಉತ್ತರಾಕಾಂಡ’ ಎಂದು ಹೆಸರಿಡಲಾಗಿದೆ.

ಉತ್ತರ ಕರ್ನಾಟಕ ಭಾಗದ ಗ್ಯಾಂಗ್ ಸ್ಟರ್ ಗಳ ಕಥೆ ಇದಾಗಿರಲಿದ್ದು, ಪಕ್ಕ ಉತ್ತರ ಕನ್ನಡದ ಶೈಲಿ ಹಾಗು ಭಾಷೆಯಲ್ಲಿರುವ ಸಾಧ್ಯತೆಗಳಿವೆ. ಸಿನಿಮಾಗೆ ಬಹುಪಾಲು ಉತ್ತರ ಕನ್ನಡದ ಕಲಾವಿದರನ್ನೇ ಹಾಕಿಕೊಳ್ಳುವ ಸಾಧ್ಯತೆಯಿದ್ದು, ರೋಹಿತ್ ಪದಕಿ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಕನ್ನಡಿಗರಿಗೆ ಸಂತಸ ತಂದಿದೆ. ಅವರಷ್ಟು ಅದ್ಭುತವಾಗಿ ಉತ್ತರಕರ್ನಾಟಕ ಶೈಲಿಯನ್ನೂ ಯಾರು ತೆರೆಮೇಲೆ ತರಲಾರರು ಎಂಬ ಅಭಿಪ್ರಾಯ ಈಗಾಗಲೇ ಜನರಲ್ಲಿ ಮೂಡಿದೆ. ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತವಿರಲಿದೆ. ಸದ್ಯ ‘ಉತ್ತರಾಕಾಂಡ’ ಎಂಬ ಶೀರ್ಷಿಕೆಯನ್ನಷ್ಟೇ ಹೊರಬಿಟ್ಟಿರುವ ಈ ಆಕ್ಷನ್ ಡ್ರಾಮಾ ರೀತಿಯ ಚಿತ್ರವನ್ನು 2023ರ ಜನವರಿಯಿಂದ ಚಿತ್ರೀಕರಿಸಲು ಆರಂಭಿಸಲಾಗುತ್ತದೆ.