• April 14, 2022

ಮುಂಗಡ ಬುಕಿಂಗ್ ನಲ್ಲಿ ಬಾಹುಬಲಿಯನ್ನೇ ಹಿಂದಿಕ್ಕಿತು ಕೆಜಿಎಫ್!!

ಮುಂಗಡ ಬುಕಿಂಗ್ ನಲ್ಲಿ ಬಾಹುಬಲಿಯನ್ನೇ ಹಿಂದಿಕ್ಕಿತು ಕೆಜಿಎಫ್!!

ಕೆಜಿಎಫ್ ಹಾಗು ಬಾಹುಬಲಿ, ನಿಸ್ಸಂದೇಹವಾಗಿ ಭಾರತ ಚಿತ್ರರಂಗದ ಎರಡು ದಿಗ್ಗಜ ಹೆಸರುಗಳು. ಕೆಜಿಎಫ್ ಗು ಬಲುಮುನ್ನವೇ ಬಂದಂತಹ ಬಾಹುಬಲಿ ಚಿತ್ರ ಮಾಡಿದಂತ ರೆಕಾರ್ಡ್ ಗಳಿಗೆ ಲೆಕ್ಕವೇ ಇಲ್ಲ. ಆ ರೆಕಾರ್ಡ್ ಗಳನ್ನು ಮುರಿಯಲು ಮತ್ತೊಂದು ಬೃಹತ್ ಚಿತ್ರವೇ ಬರಬೇಕು ಎಂಬ ಮಾತು ಇಡೀ ದೇಶದಾದ್ಯಂತ ಹಬ್ಬಿತ್ತು. ಈಗ ಆ ರೆಕಾರ್ಡ್ ಗಳು ಒಂದೊಂದಾಗಿ ತಲೆಕೆಳಗಾಗುತ್ತಿವೆ. ಕಾರಣ ಇಂದು(ಏಪ್ರಿಲ್ 14) ಬಿಡುಗಡೆಯಾಗಿರುವ ಕೆಜಿಎಫ್ ಚಾಪ್ಟರ್ 2.

ಏಪ್ರಿಲ್ 10ರಿಂದ ನಮ್ಮ ಕನ್ನಡದ ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿತ್ತು. ಕೆಜಿಎಫ್ ಚಾಪ್ಟರ್ 2 ಚಿತ್ರದ ಹಿಂದಿ ಆವೃತ್ತಿ ಸದ್ಯ ಬಾಹುಬಲಿ- ದಿ ಕಂನ್ಕ್ಲೂಷನ್ ಚಿತ್ರದ ಮುಂಗಡ ಬುಕಿಂಗ್ ನ ದಾಖಲೆಗಳನ್ನ ದಾಟಿ ನಿಂತಿದೆ. ಮೊದಲನೇ ದಿನದ ಬುಕಿಂಗ್ ಗಳು ಬಾಹುಬಲಿ ಚಿತ್ರಕ್ಕಿಂತ 15% ಹೆಚ್ಚಾಗಿವೆ. ಕೆಜಿಎಫ್ ಚಾಪ್ಟರ್ 2 ಚಿತ್ರದ ಮುಂಗಡ ಬುಕಿಂಗ್ ಸುಮಾರು 38 ಕೋಟಿ ಗಳಿಸಿದರೆ, ಇದರಲ್ಲಿ ಮೊದಲನೇ ದಿನದ ಲೆಕ್ಕಾಚಾರ 21.5 ಕೋಟಿ. ಈ ಮುಂಗಡ ಬುಕಿಂಗ್ ನ ಬಹುಪಾಲು ಭಾಗ ಮಲ್ಟಿಪ್ಲೆಕ್ಸ್ ಗಳಾದ ಪಿವಿಆರ್, ಐನೊಕ್ಸ್ ಹಾಗು ಸಿನಿಪೋಲೀಸ್ ಗಳ ಕೊಡುಗೆ. ಈ ಮೂರು ಮಲ್ಟಿಪ್ಲೆಕ್ಸ್ ಗಳಿಂದಲೇ ಮೊದಲ ದಿನಕ್ಕೆ ಅಂದಾಜು 5.10 ಲಕ್ಷ ಟಿಕೆಟ್ ಗಳು ಬುಕ್ ಆಗುವ ಮೂಲಕ ಸುಮಾರು 12.90 ಕೋಟಿ ಕಲೆಕ್ಷನ್ ಆಗಿದೆ. ಅಲ್ಲದೇ ಈ ನಾಲ್ಕು ದಿನದ ವಾರಾಂತ್ಯದಲ್ಲಿ ಸುಮಾರು 8.6 ಲಕ್ಷ ಟಿಕೆಟ್ ಗಳನ್ನು ಹಂಚಿ 22 ಕೋಟಿಯ ವ್ಯವಹಾರವನ್ನ ಮಾಡುವುದರ ಮೂಲಕ ಸದ್ಯ ಮುಂಗಡ ಬುಕಿಂಗ್ ನಲ್ಲಿ ಸುಮಾರು 57% ಭಾಗವನ್ನ ಈ ಮೂರು ಮಲ್ಟಿಪ್ಲೆಕ್ಸ್ ದಿಗ್ಗಜರುಗಳೇ ಮಾಡಿವೆ.

ಹಿಂದಿ ಭಾಷೆಯ ದಾಖಲೆಗಳೆಲ್ಲ ಬಹುಪಾಲು ಬಾಹುಬಲಿ- ದಿ ಕಂನ್ಕ್ಲೂಷನ್ ಹಾಗು ‘ವಾರ್’ ಸಿನಿಮಾಗಳೇ ಹೊಂದಿರುವುದರಿಂದ ಸದ್ಯ ಕೆಜಿಎಫ್ ಚಾಪ್ಟರ್ 2 ಆದಷ್ಟು ಬೇಗ ಈ ಎಲ್ಲ ದಾಖಲೆಗಳನ್ನ ಮುರಿಯೋ ಸಾಧ್ಯತೆಯಿದೆ. ಒಡಿಶಾ ಹಾಗು ಮುಂಬೈ ಭಾಗದಲ್ಲಿ ಟಿಕೆಟ್ ಗಳು ಬರದಿಂದ ಬುಕ್ ಆಗುತ್ತಿದ್ದು, ಈ ಪ್ರಾಂತದ ದಾಖಲೆಗಳೆಲ್ಲ ಸದ್ಯದಲ್ಲೇ ಕೆಜಿಎಫ್ ಹೆಸರಿನಡಿಗೆ ಸೇರಲಿವೆ. ದಕ್ಷಿಣ ಭಾರತದಿಂದ ಹಿಂದಿ ಆವೃತ್ತಿಯ ಕಡೆಗೆ ಹೆಚ್ಚಿನ ಒಲವು ಹಾಗು ವ್ಯವಹಾರ ಬಾರದೆ ಇರುವ ಕಾರಣದಿಂದ ಕೆಜಿಎಫ್ ನ ಹಿಂದಿ ಆವೃತ್ತಿಯು ಭಾರತದಾದ್ಯಂತ ದಾಖಲೆ ಬರೆಯುವುದು ಸ್ವಲ್ಪ ಕಠಿಣವಾಗಬಹುದು.

ಈವರೆಗೆ ಹಿಂದಿಯಲ್ಲಿ ಬಿಡುಗಡೆಯಾದಂತ ಚಿತ್ರಗಳು ಮುಂಗಡ ಬುಕಿಂಗ್ ನಲ್ಲಿ ಮಾಡಿರುವ ದಾಖಲೆಗಳನ್ನು ಈ ಕೆಳಗೆ ಕಾಣಬಹುದು.

  1. ಕೆಜಿಎಫ್ 2 – 38-39 ಕೋಟಿ
  2. ಬಾಹುಬಲಿ: ದಿ ಕಂನ್ಕ್ಲೂಷನ್ (ಹಿಂದಿ ) – 37.53 ಕೋಟಿ
  3. ವಾರ್ – 29.53 ಕೋಟಿ
  4. ತಗ್ಸ್ ಒಫ್ ಹಿಂದೊಸ್ತಾನ್ – 26.27 ಕೋಟಿ
  5. ಟೈಗರ್ ಜಿಂದ ಹೈ – 24.76 ಕೋಟಿ
  6. ಭಾರತ್ – 23.47 ಕೋಟಿ
  7. ಸುಲ್ತಾನ್ – 21.53 ಕೋಟಿ
  8. ಸಂಜು – 20.35 ಕೋಟಿ
  9. ರೇಸ್ 3 – 19.16 ಕೋಟಿ
  10. ದಂಗಲ್ – 18.84 ಕೋಟ