• April 12, 2022

ಕೆಜಿಎಫ್ Vs ಜೆರ್ಸಿ?

ಕೆಜಿಎಫ್ Vs ಜೆರ್ಸಿ?

ಏಪ್ರಿಲ್ ತಿಂಗಳ ಈ ವಾರ ಸಿನಿರಸಿಕರಿಗೆ ಹಬ್ಬವೇ ಕಾದಿದೆ ಎಂದೇ ಹೇಳಲಾಗಿತ್ತು. ಒಂದೆಡೆ ಬಹುನಿರೀಕ್ಷಿತ ಕೆಜಿಎಫ್ ಆದರೆ, ಇನ್ನೊಂದೆಡೆ ತಳಪತಿ ವಿಜಯ್ ಅವರ ‘ಬೀಸ್ಟ್’, ಇವೆರಡರ ಮಧ್ಯೆ ಸದ್ದಿಲ್ಲದೇ ಸಿದ್ಧವಾಗಿತ್ತು ಶಾಹಿದ್ ಕಪೂರ್ ಅವರ ‘ಜೆರ್ಸಿ’. ಒಬ್ಬ ಸಿನಿಮಾ ಪ್ರೇಕ್ಷಕನಿಗೆ ಇನ್ನೇನು ಬೇಕು. ಆದರೀಗ ಒಂದು ನಿರಾಸೆ ಕಾದಿದೆ. ಮೂರರಲ್ಲಿ ಒಂದು ಚಿತ್ರ ಬಿಡುಗಡೆಗೆ ಬದಲಿ ದಿನಾಂಕವನ್ನ ಹುಡುಕಿಟ್ಟಿದೆ. ಅದುವೇ ಬಾಲಿವುಡ್ ನ ‘ಜೆರ್ಸಿ’.

ನ್ಯಾಚುರಲ್ ಸ್ಟಾರ್ ನಾನಿ ಅವರ 2019ರಲ್ಲಿ ಬಿಡುಗಡೆಗೊಂಡ ಅತಿಮೆಚ್ಚುಗೆಗಳನ್ನ ತನ್ನ ತೆಕ್ಕೆಗೆ ಸೇರಿಸಿಕೊಂಡಂತ ಒಂದು ಅದ್ಭುತ ಚಿತ್ರ ‘ಜೆರ್ಸಿ’. ಈ ಚಿತ್ರದ ಸದ್ದು ಎಷ್ಟರಮಟ್ಟಿಗಿತ್ತೆಂದರೆ ಬಾಲಿವುಡ್ ನಲ್ಲಿ ಚಿತ್ರ ರಿಮೇಕ್ ಆಗುವಷ್ಟು. ತೆಲುಗಿನ ‘ಜೆರ್ಸಿ’ ಅನ್ನ ನಿರ್ದೇಶಸಿದಂತ ಗೌತಮ್ ತಿನ್ನನುರಿ ಅವರೇ ಹಿಂದಿಯ ರಿಮೇಕ್ ಅನ್ನು ಕೂಡ ನಿರ್ದೇಶಿಸುತ್ತಿದ್ದಾರೆ. ಶಾಹಿದ್ ಕಪೂರ್ ನಾಯಕನಟರಾಗಿ ಹಾಗು ಮೃನಾಲ್ ಟಾಕುರ್ ಅವರು ನಾಯಕಿಯಾಗಿ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.

2021ರ ಡಿಸೆಂಬರ್ 31ಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿತ್ತು. ಪೋಸ್ಟರ್ ಗಳನ್ನೆಲ್ಲ ಅಂಟಿಸಿಯಾದ ಮೇಲೆ ನಿರ್ಧಾರವನ್ನ ಮುರಿಯಲಾಯಿತು. ನಂತರ ಚಿತ್ರ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ ಎಂದಾಯ್ತು. ಸುಮಾರು ಮೂರು ತಿಂಗಳಿನಿಂದ ಇದೆ ದಿನಾಂಕ ಖಾತ್ರಿಯಾಗಿತ್ತು. ಆದರೀಗ ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕ ಗೊತ್ತಾಗಿದೆ. ಈ ವಾರ ಬಿಡುಗಡೆಯಗಬೇಕಿದ್ದ ಚಿತ್ರ ಮುಂದಿನ ಶುಕ್ರವಾರ, ಅಂದರೆ ಏಪ್ರಿಲ್ 22ರಂದು ಬಿಡುಗಡೆಗೊಳ್ಳಲಿದೆ. ನಿಖರವಾದ ಕಾರಣ ಇನ್ನು ತಿಳಿದುಬಾರದಿದ್ದರೂ, ನೆಟ್ಟಿಗರು ಅಭಿಪ್ರಾಯಿಸುವಂತೆ ಇದು ಕೆಜಿಎಫ್ ಭಯವಂತೆ. ಅದಾದರೂ ಆಗಿರಬಹುದು. ಏಕೆಂದರೆ ಒಂದೇ ವಾರದಲ್ಲಿ ಎರಡು ದಕ್ಷಿಣದ ಪಾನ್-ಇಂಡಿಯನ್ ದಿಗ್ಗಜರುಗಳು ಬೆಳ್ಳಿತೆರೆ ಮೇಲೆ ಬರಬೇಕಾದರೆ ಯಾರಿಗಾದರೂ ತಮ್ಮ ಸಿನಿಮಾ ಬಿಡುಗಡೆಗೊಳಿಸಲು ಭಯವಾಗುವುದು ಸ್ವಾಭಾವಿಕ. ಕೆಜಿಎಫ್ ಚಾಪ್ಟರ್ 2 ಹಾಗು ‘ಬೀಸ್ಟ್’ನ ಕಲಹದ ಮಧ್ಯ ‘ಜೆರ್ಸಿ’ ಚಿತ್ರದ ಸದ್ದು ಕೇಳಿಸೋ ಸಾಧ್ಯತೆಗಳು ತುಂಬಾ ಕಡಿಮೆ.

ಅಲ್ಲು ಅರವಿಂದ್, ಅಮನ್ ಗಿಲ್, ದಿಲ್ ರಾಜು ಹಾಗು ಎಸ್. ನಾಗವಂಷಿ ಅವರ ನಿರ್ಮಾಣದಲ್ಲಿ ‘ಜೆರ್ಸಿ’ ಸಿದ್ಧವಾಗಿದೆ. ಅಮನ್ ಗಿಲ್ ಅವರು ಹೇಳಿಕೊಳುವಂತೆ, “ನಾವು ಈ ಚಿತ್ರಕ್ಕೆ ಹಗಲಿರುಳು ಕಷ್ಟ ಪಟ್ಟಿದ್ದೇವೆ. ಬೆವರು, ರಕ್ತ, ಕಂಬನಿ ಎಲ್ಲವನ್ನು ಹರಿಸಿದ್ದೇವೆ. ಹಾಗಾಗಿ ಈ ಚಿತ್ರವನ್ನ ಪ್ರೇಕ್ಷಕರು ಸಂಪೂರ್ಣವಾಗಿ ಕಣ್ತುಂಬಿಕೊಳ್ಳುವಂತಾಗಬೇಕು. ಅದಕಾಗಿಯೇ ಚಿತ್ರವನ್ನ ಒಂದು ವಾರ ಮುಂದೂಡಿದ್ದೇವೆ” ಎಂದಿದ್ದಾರೆ. ಏಪ್ರಿಲ್ 11ರ ರಾತ್ರಿ ಈ ನಿರ್ಧಾರ ಹೊರಬಿದ್ದಿದೆ.