- April 6, 2022
“ರೆಕಾರ್ಡ್ ಮುರಿಯೋದಲ್ಲ, ಬರಿಯೋದು ನಮ್ಮ ಗುರಿ”- ಯಶ್


ಕೆಜಿಎಫ್ ಚಾಪ್ಟರ್ 2 ಚಿತ್ರ ಬೆಳ್ಳಿತೆರೆಗಳ ಮೇಲೆ ಮೂಡಿಬರಲು ಇನ್ನೇನು ಬೆರಳೆಣಿಕೆಯಷ್ಟೇ ದಿನಗಳು ಬಾಕಿ ಇವೆ. ಇದೇ ಏಪ್ರಿಲ್ 14ರಿಂದ ಸರ್ವಸಿನಿರಸಿಕರಿಗೂ ಚಿತ್ರಮಂದಿರಗಳಲ್ಲಿ ಕಾಣಸಿಗಲಿರೋ ಈ ಅತಿನಿರೀಕ್ಷಿತ ಸಿನಿಮಾದ ಪ್ರಚಾರದೋಟ ಅತಿ ಬಿರುಸಿನಿಂದ ಸಾಗುತ್ತಿದೆ. ಒಂದೆಡೆ ಚಿತ್ರದ ಟ್ರೈಲರ್ ಹಾಗು ಹಾಡುಗಳು ಬಿಡುಗಡೆಯಾದ ಎಲ್ಲ ಭಾಷೆಯಲ್ಲೂ ಎಲ್ಲರ ಮನಸೆಳೆಯುತ್ತಿದ್ದರೆ, ಇನ್ನೊಂದೆಡೆ ಚಿತ್ರತಂಡ ಪ್ರಚಾರ-ಪ್ರವಾಸವನ್ನ ಕೈಗೊಳ್ಳುತ್ತಿದೆ. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ತನ್ನೆಡೆಗಿರುವ ನಿರೀಕ್ಷೆಗಳ ಗೋಪುರದ ಎತ್ತರವನ್ನ ಏರಿಸುತ್ತಲೇ ಇದೆ ಕೆಜಿಎಫ್ ಚಾಪ್ಟರ್ 2.


ಚಿತ್ರತಂಡದ ಪ್ರಮುಖ ವ್ಯಕ್ತಿಗಳಾದ ರಾಕಿಂಗ್ ಸ್ಟಾರ್ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನ ಟಂಡನ್, ನಿರ್ದೇಶಕ ಪ್ರಶಾಂತ್ ನೀಲ್ ಹಾಗು ನಿರ್ಮಾಪಕ ವಿ. ಕಿರಗಂದೂರು ಮುಂತಾದವರು ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತ ನವದೆಹಲಿಯನ್ನ ಭೇಟಿಯಾಗಿದ್ದರು. ನವದೆಹಲಿಯಲ್ಲಿನ ತಮ್ಮ ಚಟುವಟಿಕೆ ಮುಗಿಸಿ ಸದ್ಯ ಮುಂಬೈ ಅಲ್ಲಿರುವ ತಂಡ, ಮುಂದೆ ತಮಿಳು ನಾಡಿನೆಡೆಗೆ ಹೊರಡೋ ಭರದಲ್ಲಿದೆ. ಈ ವೇಳೆ ಸುದ್ದಿಗೋಷ್ಠಿಗಳನ್ನು ನೀಡುತ್ತಿರೋ ಚಿತ್ರತಂಡ, ಪತ್ರಿಕೆಯವರಿಂದ ಬರುವಂತಹ ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.


ನಾವಿ ಮುಂಬೈನಲ್ಲಿರುವಂತ ‘ಎಸ್ ಜಿ ಸಿ’ ಮಾಲ್ ನಲ್ಲಿ ಜನಸಾಗರವನ್ನೇ ಸ್ವಾಗತಿಸುತ್ತಿರೋ ಕೆಜಿಎಫ್ ತಂಡ ಅಲ್ಲೇ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಪತ್ರಕರ್ತೆಯೊಬ್ಬರು ಕೇಳಿದಂತ ಪ್ರಶ್ನೆಗೆ ಯಶ್ ಅತ್ಯುತ್ತಮ ಉತ್ತರವನ್ನ ನೀಡಿದ್ದಾರೆ. “RRR ಚಿತ್ರ ರೆಕಾರ್ಡ್ ಗಳನ್ನ ಹೊಸತಾಗೆ ಬರೆದಿದೆ. ಶಿಖರದೆತ್ತರದಲ್ಲಿರೋ ಈ ಅಂಕಿ-ಆಟಗಳನ್ನ ಮೀರಲು ಕೆಜಿಎಫ್ ಚಾಪ್ಟರ್ 2ಚಿತ್ರವೇ ಬರಬೇಕು ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ನಿಮ್ಮ ಚಿತ್ರದ ಮೇಲೆ ಎಲ್ಲೆಡೆ ಅತ್ಯಂತ ನಿರೀಕ್ಷೆಗಳಿವೆ. ಈ ನಿರೀಕ್ಷೆ ನಿಮಗೆ ಒತ್ತಡವಾಗತ್ತ?” ಎಂದು ಕೇಳಿದಂತ ಪ್ರಶ್ನೆಗೆ ಚಾಣಕ್ಷತೆಯಿಂದ ಉತ್ತರಿಸಿದ್ದಾರೆ ರಾಕಿಂಗ್ ಸ್ಟಾರ್.


“ನಿರೀಕ್ಷೆ ನಮಗೆ ಒತ್ತಡವಲ್ಲ ಬದಲಿಗೆ ಅದೊಂದು ಆನಂದ. ನಮ್ಮ ಸಿನಿಮಾ ನೋಡಿ ಜನ ಸಂತುಷ್ಟರಾದರೆ ನಮಗಿಂತ ಹೆಚ್ಚು ಅವರೇ ಪ್ರಚಾರ ಮಾಡುತ್ತಾರೆ. ಹಾಗಾಗಿ ರೆಕಾರ್ಡ್ಗಳು ಹೆಚ್ಚೇನು ಕಷ್ಟವಾಗಲ್ಲ. ಅಂಕಿ-ಅಂಶಗಳ ರೆಕಾರ್ಡ್ಗಳು ಮುಖ್ಯವಾದರೂ ಕೂಡ ಮನರಂಜನೆ ಇನ್ನು ಮುಖ್ಯ. ಅಲ್ಲದೇ ರೆಕಾರ್ಡ್ ಮುರಿಯುವುದಕ್ಕಿಂತ ರೆಕಾರ್ಡ್ ಬರೆಯೋದರ ಬಗ್ಗೆ ನಾವು ಹೆಚ್ಚು ಗಮನ ಕೊಡುತ್ತೇವೆ. ನಮ್ಮ ನಂತರ ಬರೋ ಸಿನಿಮಾಗಳು ಸಹ ಇಂತದ್ದೇ ರೆಕಾರ್ಡ್ಗಳನ್ನ ಬರೆಯಬೇಕು. ಆಗಲೇ ಸಿನಿಮಾ ಬೆಳೆಯುವುದು” ಎಂದಿದ್ದಾರೆ ರಾಕಿ ಭಾಯ್. ಈ ಉತ್ತರ ಅಲ್ಲಿದ್ದವರನ್ನೆಲ್ಲ ಮೆಚ್ಚಿಸುವಲ್ಲಿ ಯಶಸ್ವಿಯಾಗಿತ್ತು.


