• February 23, 2022

ತನಿಖಾ ಪತ್ರಕರ್ತೆಯಾಗಿ ತೆರೆ ಮೇಲೆ ಬರಲಿದ್ದಾರೆ ಕಾವ್ಯಾ ಶೆಟ್ಟಿ

ತನಿಖಾ ಪತ್ರಕರ್ತೆಯಾಗಿ ತೆರೆ ಮೇಲೆ ಬರಲಿದ್ದಾರೆ ಕಾವ್ಯಾ ಶೆಟ್ಟಿ

ಮನೋಜ್ಞ ನಟನೆಯ ಮೂಲಕ ನಟನಾ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ನಟಿ ಕಾವ್ಯಾ ಶೆಟ್ಟಿ ಸೋಲ್ಡ್ ಚಿತ್ರದ ಮೂಲಕ ರಂಜಿಸಲು ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಈ ಸಿನಿಮಾದಲ್ಲಿ ತನಿಖಾ ಪತ್ರಕರ್ತೆಯಾಗಿ ನಟಿಸುತ್ತಿದ್ದಾರೆ. “ಈ ಸಿನಿಮಾ ಕಮರ್ಷಿಯಲ್ ಸಿನಿಮಾ ಅಲ್ಲ. ಇದರಲ್ಲಿ ಥ್ರಿಲ್ಲರ್ ಅಂಶ ಇದ್ದು ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ ವಿಷಯ ಮಾನವ ಕಳ್ಳ ಸಾಗಾಣಿಕೆ ಕುರಿತಾಗಿ ಇರಲಿದೆ. ಇದರ ಬಗ್ಗೆ ತೀವ್ರ ಧ್ವನಿ ಇರಲಿದೆ” ಎಂದಿದ್ದಾರೆ.

ತಮ್ಮ ಪಾತ್ರದ ಕುರಿತು ಹೇಳಿರುವ ಕಾವ್ಯ “ನಾನು ರುಚಿತಾ ಎಂಬ ತನಿಖಾ ಪತ್ರಕರ್ತೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಅವಳು ಮಾನವ ಕಳ್ಳ ಸಾಗಣೆಯನ್ನು ನೋಡುತ್ತಿರುತ್ತಾಳೆ. ಅವಳ ಸ್ನೇಹಿತರ ಮಗು ಅಪಹರಣ ಆದಾಗ ವಿಷಯಗಳು ಮಂಕಾಗುತ್ತವೆ. ಅವಳ ಈ ಪಯಣದಲ್ಲಿ ಅವಳು ಪೋಲೀಸ್ ಆಫೀಸರ್ ನ್ನು ಭೇಟಿ ಆಗುತ್ತಾಳೆ. ನಟ ಡ್ಯಾನಿಶ್ ಸೇಠ್ ಪೋಲೀಸ್ ಆಫೀಸರ್ ಆಗಿ ನಟಿಸಿದ್ದಾರೆ. ಪೋಲೀಸ್ ಅವಳಿಗೆ ಸಹಾಯ ಮಾಡುತ್ತಾರೆ”ಎಂದು ಪಾತ್ರದ ಬಗ್ಗೆ ವಿವರಿಸಿದ್ದಾರೆ.

“ಈ ಸಿನಿಮಾದಲ್ಲಿ ಕೆಲಸ ಮಾಡಿರುವುದು ತುಂಬಾ ಕಂಫರ್ಟೇಬಲ್ ಅನುಭವ ನೀಡಿತು. ಮೊದಲ ಬಾರಿ ಮಹಿಳಾ ನಿರ್ದೇಶಕಿ ಜೊತೆ ಕೆಲಸ ಮಾಡಿದ್ದೇನೆ. ಪ್ರೇರಣಾ ಅಗರ್ವಾಲ್ ಈ ಸಿನಿಮಾದ ಮೂಲಕ ಡೆಬ್ಯುಟ್ ಮಾಡುತ್ತಿದ್ದಾರೆ. ಸ್ಲಮ್ ಹಾಗೂ ಅನಾಥಾಶ್ರಮಗಳಲ್ಲಿ ಶೂಟಿಂಗ್ ಮಾಡಿದ್ದು ಉತ್ತಮ ಅನುಭವ ನೀಡಿತು” ಎಂದಿದ್ದಾರೆ.

ಕೊನೆಯದಾಗಿ ಲಂಕೆ ಸಿನಿಮಾದಲ್ಲಿ ನಟಿಸಿದ್ದ ಕಾವ್ಯ ಶೆಟ್ಟಿ ತಮ್ಮ ಪಾತ್ರಗಳ ಆಯ್ಕೆ ಕುರಿತು ಹೇಳಿಕೊಂಡಿದ್ದಾರೆ.” ನಾನು ವಿಭಿನ್ನ ಪಾತ್ರಗಳತ್ತ ಗಮನ ಹರಿಸುತ್ತಿದ್ದೇನೆ. 2018ರಲ್ಲಿ ಸೋಲ್ಡ್ ಸಿನಿಮಾ ಶಾಟ್ ಮಾಡಿದ್ದೇನೆ. ಇದೊಂದು ಹೊಸ ಅನುಭವ ಆಗಿತ್ತು. ಇದರಲ್ಲಿ ಎಲ್ಲಾ ಸಿನಿಮಾಗಳಂತೆ ಹಾಡು ಹಾಗೂ ಡ್ಯಾನ್ಸ್ ಇರಲಿಲ್ಲ. ಆದರೆ ಇದೊಂದು ಗಂಭೀರವಾದ ಸಿನಿಮಾ”ಎಂದಿದ್ದಾರೆ.

ದಕ್ಷಿಣ ಭಾರತದ 4 ಭಾಷೆಗಳಲ್ಲಿ ನಟಿಸುತ್ತಿರುವ ಕಾವ್ಯ” ವಿವಿಧ ಭಾಷೆಗಳಲ್ಲಿ ಸಿನಿಮಾಗಳನ್ನು ಸರಿದೂಗಿಸಿಕೊಂಡು ಮಾಡುತ್ತಿರುವುದು ಖುಷಿಯ ಅನುಭವ. ತುಂಬಾ ಜನ ಹೀಗೆ ಮಾಡುತ್ತಿದ್ದಾರೆ. ಆದರೆ ಇದು ಸ್ವಲ್ಪ ಕಷ್ಟ. ಆದರೆ ಖುಷಿ. ದಕ್ಷಿಣ ಭಾರತದಲ್ಲಿ ಉತ್ತಮ ತಂತ್ರಜ್ಞರು ಇದ್ದಾರೆ. ವಿವಿಧ ಭಾಷೆಗಳಲ್ಲಿ ಉತ್ತಮ ಪಾತ್ರಗಳು ದೊರೆಯಲು ಪುಣ್ಯ ಮಾಡಿದ್ದೆ” ಎಂದಿದ್ದಾರೆ.