• April 20, 2022

ಕಾವ್ಯಾ ಶಾ ಮದುವೆಗೆ ವಿಘ್ನ

ಕಾವ್ಯಾ ಶಾ ಮದುವೆಗೆ ವಿಘ್ನ

ನಟಿ, ನಿರೂಪಕಿ ಕಾವ್ಯಾ ಶಾ ಅವರು ನಿರ್ಮಾಪಕ ವರುಣ್ ಕುಮಾರ್ ಗೌಡ ಅವರೊಂದಿಗೆ ಅದ್ದೂರಿಯಾಗಿ ವಿವಾಹ ಮಾಡಿಕೊಳ್ಳಬೇಕಿತ್ತು. ಮೊನ್ನೆ 18 ರಂದು ನಂದಿ ಲಿಂಕ್ ಗ್ರೌಂಡ್ ನಲ್ಲಿ ನಡೆಯಬೇಕಿದ್ದ ಈ ಮದುವೆ ವರುಣ್ ಅವರ ತಂದೆಯ ನಿಧನದಿಂದಾಗಿ ಮುಂದೂಡಲ್ಪಟ್ಟಿದೆ.

ಈ ಸುದ್ದಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಾವ್ಯ ಶಾ “ಭಾವಿ ಪತಿ ವರುಣ್ ಅವರ ತಂದೆ ನಿಧನದ ಕಾರಣ ನಮ್ಮ ಮದುವೆಯನ್ನು ಸ್ವಲ್ಪ ಕಾಲ ಮುಂದೂಡಲಾಗಿದೆ”ಎಂದು ಬರೆದುಕೊಂಡಿದ್ದಾರೆ.

ಇನ್ನು ಮದುವೆಯ ಸಡಗರದಲ್ಲಿದ್ದ ಕಾವ್ಯ ಶಾ ಇತ್ತೀಚೆಗಷ್ಟೇ ತನ್ನ ಮದುವೆಯ ಕುರಿತು ಮಾತನಾಡಿದ್ದರು. “ಕಳೆದ 11 ವರ್ಷಗಳಿಂದ ವರುಣ್ ನನಗೆ ಗೊತ್ತು. ಪೆಜೆಂಟ್ ಶೋನಲ್ಲಿ ನಮ್ಮಿಬ್ಬರ ಮೊದಲ ಭೇಟಿಯಾಯಿತು. ನಾನು ಆ ಶೋವಿನ ಸ್ಪರ್ಧಿಯಾಗಿದ್ದೆ. ವರುಣ್ ಅವರು ಶೋ ವನ್ನು ಆಯೋಜಿಸಿದ್ದರು. ಗೆಳೆತನ ಪ್ರೀತಿ ಹಂತಕ್ಕೆ ತಿರುಗಿತು. ಮನೆಯವರ ಒಪ್ಪಿಗೆಯಂತೆ ಮದುವೆಯಾಗಲು ನಿರ್ಧರಿಸಿದೆವು. ಅವರು ಹಲವು ಟಿವಿ ಶೋಗಳನ್ನು ನಿರ್ಮಿಸಿದ್ದಾರೆ” ಎಂದಿದ್ದರು.

ಇದರ ಜೊತೆಗೆ ಪುನೀತ್ ರಾಜ್ ಕುಮಾರ್ ಅವರ ನೆನಪಿನಲ್ಲಿ ಕಾಡಿನ ಥೀಮ್ ನಲ್ಲಿ ಮದುವೆಯಾಗುವ ಪ್ಲಾನ್ ಇಟ್ಟುಕೊಂಡಿದ್ದರು ಕಾವ್ಯಾ ವರುಣ್ ದಂಪತಿ. ಮಾತ್ರವಲ್ಲ ಮದುವೆಗೆ ಬರುವ ಅತಿಥಿಗಳಿಗೆ ಅಂಗಾಗ ದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗುವುದು ಎಂದು ಈ ಮೊದಲು ಹೇಳಿಕೊಂಡಿದ್ದರು ಕಾವ್ಯಾ.