• June 16, 2022

ಮನರಂಜನೆ ನೀಡಲು ಬರಲಿದ್ದಾರೆ ಬಡ್ಡೀಸ್

ಮನರಂಜನೆ ನೀಡಲು ಬರಲಿದ್ದಾರೆ ಬಡ್ಡೀಸ್

ಕಾಲೇಜು ಬದುಕಿನ ಕಥೆಯನ್ನೊಳಗೊಂಡ ಸಿನಿಮಾಗಳು ಬರುತ್ತಿರುವುದು ಹೊಸತೇನಲ್ಲ. ಆದರೆ ಪ್ರತಿ ಸಿನಿಮಾದಲ್ಲಿ ಹೊಸತೊಂದು ಅಂಶವಿರುವುದಂತೂ ನಿಜ. ಇದೀಗ ಅದೇ ಕಾಲೇಜು, ಅದೇ ಸ್ನೇಹದ ಕುರಿತಾದ ಹೊಸ ಚಿತ್ರವೊಂದು ತೆರೆಗೆ ಬರಲು ಸಿದ್ಧವಾಗಿದೆ. ಅದುವೇ ಬಡ್ಡೀಸ್. ಗುರು ತೇಜ್ ಶೆಟ್ಟಿ ನಿರ್ದೇಶನದ ಬಡ್ಡೀಸ್ ಸಿನಿಮಾ ಇದೇ ಜೂನ್ 24 ರಂದು ಬಿಡುಗಡೆಯಾಗಲಿದೆ.

ಬರೋಬ್ಬರಿ 15 ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಗುರು ತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶನ ಮಾಡಿದ್ದು ಸಿನಿಮಾದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. “ಬಡ್ಡೀಸ್.. ಸಿನಿಮಾದ ಒಳಾರ್ಥವನ್ನು ಸ್ವತಃ ಹೆಸರೇ ಸೂಚಿಸುತ್ತದೆ. ಇದು ಒಂದು ಸ್ನೇಹದ ಕುರಿತಾದ ಕಥೆಯನ್ನೊಳಗೊಂಡ ಸಿನಿಮಾ. ಇಂಜಿನಿ ಕಾಲೇಜಿನಲ್ಲಿ ಆರಂಭವಾಗುವ ಈ ಸಿನಿಮಾದಲ್ಲಿ ಎಲ್ಲಾ ಕಾಲೇಜಿನಲ್ಲಿ ಇರುವಂತೆ ತಮಾಷೆಯಿದೆ, ತರಲೆ ಇದೆ, ಮೋಜು ಮಸ್ತಿ ಇವೆಲ್ಲವೂ ಇದೆ. ಇದರ ಹೊರತಾಗಿ ಒಂದಷ್ಟು ವಿಚಾರಗಳಿದ್ದು ಅದೇನೆಂದು ನೀವು ಸಿನಿಮಾ ನೋಡಿಯೇ ತಿಳಿಯಬೇಕು” ಎನ್ನುತ್ತಾರೆ ಗುರು ತೇಜ್ ಶೆಟ್ಟಿ.

“ಪ್ರೆಂಡ್ ಶಿಪ್, ಕಾಲೇಜು ವಿಷಯಾಧಾರಿತ ಸಿನಿಮಾ ಎಂದಾಗ ಇದು ಮಾಮೂಲಿ ಎಂದು ನಿಮಗೆ ಅನ್ನಿಸುವುದು ಸಹಜ. ಆದರೆ ಇಲ್ಲಿಯವರೆಗೆ ತೆರೆ ಕಂಡಿರುವಂತಹ ಎಲ್ಲಾ ಸಿನಿಮಾಗಳಿಗಿಂತ ಇದು ನಿಜವಾಗಿಯೂ ಭಿನ್ನ. ಅದು ಏನು ಎಂದು ತಿಳಿಯುವ ಕುತೂಹಲ ನಿಮಗಿದ್ದರೆ ತಪ್ಪದೇ ಸಿನಿಮಾ ನೋಡಿ” ಎಂದು ಹೇಳುವ ಗುರುತೇಜ್ ಶೆಟ್ಟಿ ಈ ಸಿನಿಮಾದ ನಿರ್ದೇಶನದ ಜೊತೆಗೆ ಕಥೆ, ಸಂಭಾಷಣೆ ಹಾಗೂ ಹಾಡುಗಳನ್ನು ಬರೆದಿದ್ದಾರೆ.