- June 15, 2022
ಡಾ. ದೇವ್ ಪಾತ್ರಕ್ಕೆ ವಿದಾಯ ಹೇಳಿದ ವಿಜಯ್ ಕೃಷ್ಣ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ಕನ್ನಡತಿಯೂ ಒಂದು. ವಿಭಿನ್ನ ಕಥಾ ಹಂದರದ ಜೊತೆಗೆ ಉತ್ತಮ ಕಲಾವಿದರುಗಳನ್ನೊಳಗೊಂಡ ಕನ್ನಡತಿ ಧಾರಾವಾಹಿಯು ಕಡಿಮೆ ಅವಧಿಯಲ್ಲಿಯೇ ಕಿರುತೆರೆ ವೀಕ್ಷಕರ ಮನ ಸೆಳೆದುಬಿಟ್ಟಿದೆ. ಇಂತಿಪ್ಪ ಕನ್ನಡತಿ ಯಲ್ಲಿ ಇದೀಗ ಮತ್ತೊಂದು ಪಾತ್ರದ ಬದಲಾವಣೆ ಆಗಿದೆ.


ಹೌದು, ಈಗಾಗಲೇ ಕನ್ನಡತಿಯಲ್ಲಿ ಸಾನಿಯಾ ಪಾತ್ರಧಾರಿಯ ಬದಲಾವಣೆ ಆಗಿರುವುದು ವೀಕ್ಷಕರಿಗೆ ಗೊತ್ತೇ ಇದೆ. ಇದೀಗ ದೇವ್ ಪಾತ್ರವೂ ಬದಲಾವಣೆಯಾಗಿದ್ದು ವಿಜಯ್ ಕೃಷ್ಣ ಅವರು ಕಾರಣಾಂತರಗಳಿಂದ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದಾರೆ.


ರಂಗಭೂಮಿ ನಟನಾಗಿ ಗುರುತಿಸಿಕೊಂಡಿರುವ ವಿಜಯ್ ಕೃಷ್ಣ ಬರೋಬ್ಬರಿ 13 ವರ್ಷಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ರಂಗಭೂಮಿಯಲ್ಲಿ ಒಂದಷ್ಟು ನಿರ್ದೇಶಕರೊಂದಿಗೆ ಕೆಲಸ ಮಾಡಿ ಅನುಭವ ಇರುವ ವಿಜಯ್ ಕೃಷ್ಣ ಮುಂದೆ ನಟನಾಗ ಬಯಸಿದರು.


ಮೊದಲ ಧಾರಾವಾಹಿಯಲ್ಲಿ ನಾಯಕನ ಚಿಕ್ಕಮ್ಮನ ಮಗ ಡಾ.ದೇವ್ ಆಗಿ ಅಭಿನಯಿಸಿದ್ದ ವಿಜಯ್ ಕೃಷ್ಣ ಅವರು ಆ ಪಾತ್ರದ ಮೂಲಕ ಗುರುತಿಸಿಕೊಂಡರು. ಮೊದಲ ಧಾರಾವಾಹಿಯಲ್ಲಿಯೇ ಇಷ್ಟು ಉತ್ತಮವಾದ ಪಾತ್ರ ದೊರೆಯುತ್ತದೆ, ಜನ ನನ್ನನ್ನು, ನನ್ನ ನಟನೆಯನ್ನು ಸ್ವೀಕರಿಸುತ್ತಾರೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ” ಎಂದು ದೇವ್ ಪಾತ್ರದ ಬಗ್ಗೆ ಹೇಳುತ್ತಾರೆ ವಿಜಯ್ ಕೃಷ್ಣ.


“ಕನ್ನಡತಿ ಇದೊಂದು ತಂಡ ಎನ್ನುವುದಕ್ಕಿಂತಲೂ ಒಂದು ಕುಟುಂಬ ಎಂದೇ ಹೇಳಬಹುದು. ಇದು ಹಿರಿಯ ಕಿರಿಯ ಕಲಾವಿದರುಗಳ ಸಮಾಗಲವಾಗಿದೆ ಎನ್ನಬಹುದು” ಎಂದು ಹೇಳುವ ವಿಜಯ್ ಕೃಷ್ಣ ಕನ್ನಡತಿಯ ಹೊರತಾಗಿ ಕ್ಯಾಬ್ರೆ ಎನ್ನುವ ವೆಬ್ ಸಿರೀಸ್ ನಲ್ಲಿ ಪ್ಲೇ ಬಾಯ್ ಅವತಾರದಲ್ಲಿ ನಟಿಸಿದ್ದಾರೆ.




