• March 20, 2022

ಪರಭಾಷೆಯಲ್ಲೂ ಕನ್ನಡದ ಹೆಮ್ಮೆ ‘ಕನ್ನಡತಿ’

ಪರಭಾಷೆಯಲ್ಲೂ ಕನ್ನಡದ ಹೆಮ್ಮೆ ‘ಕನ್ನಡತಿ’

ಡಬ್ಬಿಂಗ್ ಅಥವಾ ರಿಮೇಕ್ ಕೇವಲ ಸಿನಿಮಾಗಳಿಗಷ್ಟೇ ಸೀಮಿತವಾಗಿಲ್ಲ. ಬದಲಾಗಿ, ಕಿರುತೆರೆಯ ಮೇಲೆ ಬಂದು ಪ್ರತಿದಿನ ಜನಮಾನಸವನ್ನ ಮನರಂಜಿಸೊ ಧಾರವಾಹಿಗಳು ಕೂಡ ಇದಕ್ಕೆ ಒಳಪಟ್ಟಿವೆ. ದಿನವೆಲ್ಲ ದುಡಿದು, ದಣಿದು ಟಿವಿ ಮುಂದೆ ಕೂರೊ ಪ್ರೇಕ್ಷಕರಿಗೆ ಒಂದರ್ಧ ಗಂಟೆಯ ತಮ್ಮ ಕಥಾಹಂದರದಿಂದ, ಪ್ರತಿದಿನ ಆನಂದ ನೀಡೋ ಧಾರಾವಾಹಿಗಳು ಸರ್ವರಿಗೂ ಅಚ್ಚುಮೆಚ್ಚು. ಅದರಲ್ಲು ಕನ್ನಡದಲ್ಲಂತು ಕಿರುತೆರೆ ಬೆಳ್ಳಿತೆರೆ ಎರಡೂ ಕೂಡ ಒಂದೇ ಸಮನಾಗಿ ಬೆಳೆಯುತ್ತಿವೆ. ಇಲ್ಲಿವರೆಗೆ ಬಹುಪಾಲು ಬೇರೆ ಭಾಷೆಗಳಿಂದ ಕನ್ನಡಕ್ಕೆ ಬಂದಂತ ಧಾರಾವಾಹಿಗಳೇ ಹೆಚ್ಚಾಗಿರುವಾಗ ಇಲ್ಲೊಂದು ಕನ್ನಡದ ಸ್ವಂತ ಧಾರಾವಾಹಿ ಮರಾಠಿಯಲ್ಲಿ ಮೋಡಿ ಮಾಡಲು ಸಜ್ಜಾಗಿದೆ.

2020ರ ಜನವರಿಯಲ್ಲಿ ಆರಂಭವಾಗಿ ಸುಮಾರು 550ಕ್ಕೂ ಹೆಚ್ಚಿನ ಸಂಚಿಕೆಗಳೊಂದಿಗೆ ಮುನ್ನುಗ್ಗುತ್ತಿರೋ ‘ಕನ್ನಡತಿ’ ಧಾರಾವಾಹಿ ಕನ್ನಡಿಗರೆಲ್ಲರ ಅಚ್ಚುಮೆಚ್ಚಾಗಿದೆ. ಭುವಿಯ ಸ್ಪಷ್ಟ ಕನ್ನಡ ಹಾಗು ಕನ್ನಡತನ, ಹರ್ಷನ ಒಳ್ಳೆತನ ಹೀಗೆ ಇಲ್ಲಿನ ಕಥೆಗೆ, ಕಥೆಯಲ್ಲಿನ ಪಾತ್ರಗಳಿಗೆ ಹೊಂದಿಕೊಳ್ಳದವರೇ ಇಲ್ಲವೆಂದರೂ ತಪ್ಪಾಗಲಾಗದು. ಈಗ ಈ ಧಾರಾವಾಹಿ ತನ್ನ ಸೆಳೆತವನ್ನ ಕನ್ನಡಿಗರಿಗೆ ಮಾತ್ರವಲ್ಲದೆ, ಮರಾಠಿ ಪ್ರೇಕ್ಷಕರಿಗೂ ಹಬ್ಬಲು ತಯಾರಾಗಿದೆ. ಕಲರ್ಸ್ ಮರಾಠಿ ವಾಹಿನಿಯಲ್ಲಿ ಇದೇ ಏಪ್ರಿಲ್ 4ರಿಂದ ರಾತ್ರಿ 9:30ಕ್ಕೆ ಸರಿಯಾಗಿ ಟಿವಿ ಪರದೆಗಳಲ್ಲಿ ಪ್ರಸಾರವಾಗಲಿರೋ ‘ಭಾಗ್ಯ ದಿಲೆ ತು ಮಲ’ ಎಂಬ ಧಾರಾವಾಹಿಯ ಮೂಲಕ. ಈ ಧಾರವಾಹಿ ‘ಕನ್ನಡತಿ’ಯ ರಿಮೇಕ್ ಎನ್ನುವುದನ್ನು ತಂಡದವರು ಹಾಗು ಕಲರ್ಸ್ ವಾಹಿನಿಯವರು ಸ್ಪಷ್ಟಪಡಿಸಿ ಘೋಷಿಸಿದ್ದಾರೆ.

ಮರಾಠಿಯಲ್ಲಿ ಧಾರವಾಹಿಯ ಪ್ರೊಮೊ ವಿಡಿಯೋ ಒಂದು ಬಿಡುಗಡೆಯಾಗಿದ್ದು, ಎಲ್ಲೆಡೆ ಎಲ್ಲರ ಮೆಚ್ಚುಗೆಯನ್ನ ಪಡೆಯುತ್ತಿದೆ. ಕನ್ನಡದಲ್ಲಿ ‘ಕನ್ನಡತಿ’ ಮಾಡುತ್ತಿರೋ ಮೋಡಿಯಂತೆ ಮರಾಠಿಯಲ್ಲೂ ಆಗಲಿ ಎಂಬುದೇ ನಮ್ಮಾಸೆ. ಕನ್ನಡದ ‘ಕನ್ನಡತಿ’ಯ ಕೀರ್ತಿ ಎಲ್ಲ ಕಡೆ ಹರಡಲಿ ಎಂದು ಮನದುಂಬಿ ಹಾರೈಸೋಣ.